ಬೆಳಗಾವಿ : ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಶತಮಾನೋತ್ಸವ ಆಚರಣೆ ಐತಿಹಾಸಿಕ ಕಾರ್ಯಕ್ರಮವಾಗಿದೆ. 1924ರಲ್ಲಿ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದರು. ಅಧಿಕಾರ ಸ್ವೀಕರಿಸುತ್ತಿದ್ದ ವೇಳೆ ಜವಹಾರ್ ಲಾಲ್ ನೆಹರು ಹಾಗೂ ಕರ್ನಾಟಕದವರಾದ ಗಂಗಾಧರ ದೇಶಪಾಂಡೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು.
ಇಲ್ಲಿಂದಲೇ ಮಹಾತ್ಮಾ ಗಾಂಧಿ ದೇಶದ ಸ್ವಾತಂತ್ರ್ಯಕ್ಕೆ ಧುಮುಕಿದ್ದರು. ಹೀಗಾಗಿ ನಾವು 2023ರ ಚುನಾವಣೆ ಸಂದರ್ಭದಲ್ಲಿ ಇದೇ ಜಾಗದಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವು. ಪರಿಣಾಮ ರಾಜ್ಯದಲ್ಲಿ 136 ಕ್ಷೇತ್ರಗಳನ್ನು ಗೆದ್ದು ಸುಭದ್ರ ಸರ್ಕಾರ ನಿರ್ಮಿಸಿದ್ದೇವೆ ಎಂದಿದ್ದಾರೆ.
ಈಗ ಮತ್ತೆ ರಾಜ್ಯವನ್ನು ಹಾಗೂ ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆಸಲು ಕಾರ್ಯಕ್ರಮ ನಡೆಸುತ್ತಿದ್ದೇವೆ. ದೇಶ ಹಾಗೂ ರಾಜ್ಯ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಿ ಯಾವ ರೀತಿ ಹೋರಾಟ ಮಾಡಬೇಕು ಎಂಬುವುದನ್ನು ದೇಶದ ಎಲ್ಲ ಪ್ರಮುಖ ನಾಯಕರು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಪ್ರಮುಖ 500ರಿಂದ 600 ಜನ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.