ಬೈಂದೂರು : ಶತಮಾನಗಳ ಇತಿಹಾಸ ಹೊಂದಿರುವ ಬೈಂದೂರು ತಾಲ್ಲೂಕಿನ ಉಳ್ಳೂರು-11ರಲ್ಲಿ ಕೆರೆಗದ್ದೆ ರಾಮ ಗಾಣಿಗ ಹಾಗೂ ಸಹೋದರರು, ಸಂಬಂಧಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಆಚರಿಸಿಕೊಂಡು ಬಂದಿರುವ ಇತಿಹಾಸ ಪ್ರಸಿದ್ದ ಕೆರೆಗದ್ದೆ ಕಂಬಳೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವ ಈ ಬಾರಿ ಹಲವಾರು ವಿಶೇಷತೆಗಳಿಂದ ಸಂಭ್ರಮದಿಂದ ನಡೆಯಿತು.

ಕಂಬಳ ಅಭಿಮಾನಿ ಬಳಗ ಉಳ್ಳೂರು-11 ಹಾಗೂ ಕೆರೆಗದ್ದೆ ಮನೆಯವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಮಠ ಗೋಪಾಲ್ ಉಡುಪರ ಶುಭ ಆಶೀರ್ವಾದದೊಂದಿಗೆ, ದೈವ, ದೇವರ ಪೂಜೆ ಕಾರ್ಯಾದಿಗಳು ನೆರವೇರಿದವು. ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ಮರ್ಯಾದೆ, ಸ್ಮರಣಿಕೆಯೊಂದಿಗೆ ಸ್ವಾಗತಿಸಲಾಯಿತು. ಮನೆಯ ಕೋಣಗಳಿಗೆ ಬೈಂದೂರು ಕಂಬಳ ಸಮಿತಿಯ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು ಇವರು ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.

ಶಾಸಕ ಗುರುರಾಜ್ ಗಂಟಿಹೊಳೆಯವರು ಬೈಂದೂರು ಕಂಬಳ ಸಮಿತಿಯ ವತಿಯಿಂದ ಸಂಪ್ರದಾಯಕಿಯ ಕಂಬಳವನ್ನು ಪ್ರೋತ್ಸಾಹಿಸುವ ಸಲುವಾಗಿ ಕೆರೆಗೆದ್ದೆ ಮನೆಯವರಾದ ಲಿಂಗ ಗಾಣಿಗ ಇವರನ್ನು ಪ್ರೀತಿಪೂರ್ವಕವಾಗಿ ಗೌರವಿಸಿ ಮಾತನಾಡಿದರು. ಇಲ್ಲಿ ನೂರಾರು ವರ್ಷಗಳಿಂದ ಕಂಬಳ ನಡೆಯುತ್ತಿದ್ದು, ಮಧ್ಯೆ ಒಮ್ಮೆ ನಿಂತಿತ್ತು. ಆ ಬಳಿಕ ಕೆರೆಗದ್ದೆ ಮನೆತನದವರು, ಉಳ್ಳೂರಿನ ಕಂಬಳ ಅಭಿಮಾನಗಳ ಬಳಗ ಒಟ್ಟಾಗಿ ಈ ಕಂಬಳವನ್ನು ಪ್ರತೀ ವರ್ಷ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಕೆರೆಗದ್ದೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಎಸ್. ಪ್ರಕಾಶ್‌ಚಂದ್ರ ಶೆಟ್ಟಿಯವರು ಊರಿನ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪ್ರತಿಭೆಗಳಾದ ರಜತ ಪೂಜಾರಿ ಹೊಕ್ಕೊಳಿಮನೆ ಹಾಗೂ ಕೀರ್ತಿ ಪೂಜಾರಿ ಅಜ್ಜಿಮನೆ ಹಾಗೂ ಬೈಂದೂರು ಕಂಬಳ ಸಮಿತಿಯ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು, ರಾಜ್ಯ ಕಂಬಳ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ವಿಕ್ರಮ ಪೂಜಾರಿ ಸಸಿಹಿತ್ಲು ಇವರನ್ನು ಸನ್ಮಾನಿಸಿ ಮಾತನಾಡಿದರು. ವಿಶೇಷವಾಗಿ ಈ ಬಾರಿ ಕೆರೆಗದ್ದೆಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ ಗಣೇಶ ಪೂಜಾರಿ ಹೊಸೊಕ್ಲುಮನೆ ಇವರ ಸೇವೆಯನ್ನು ನೋಡಿ ಅವರಿಗೆ ಅಭಿಂದನೆ ಸಲ್ಲಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಿರಿಮಂಜೇಶ್ವರ ಅಗಸ್ತೇಶ್ವರ ಸಮಿತಿಯ ಅಧ್ಯಕ್ಷರಾದಂತಹ ಪ್ರದೀಪ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ, ಸದಸ್ಯರಾದ ಸುಳಿಯಣ್ಣ ಶೆಟ್ಟಿ , ಸತೀಶ್ ಕುಮಾರ್ ಶೆಟ್ಟಿ ಹಾಗೂ ಬುಜಂಗಶೆಟ್ಟಿ ಕೂಕನಾಡು , ಶೇಖರ್ ಪೂಜಾರಿ ಗುಡಾಡಿ ಸಮರ ಶೆಟ್ಟಿ ಕೆಳಮನೆ ಬೈಂದೂರು ಕಂಬಳ ಸಮಿತಿಯ ಉಪಾಧ್ಯಕ್ಷರಾದ ಪರಮೇಶ್ವರ್ ಭಟ್, ದಿನೇಶ್ ಆಚಾರ್ಯ ಕಾರ್ಯದರ್ಶಿಯಾದಂತಹ ಸುಧೀರ್ ದೇವಾಡಿಗ ಹಾಗೂ ಕಿಶೋರ್ ಪೂಜಾರಿ ಸಸಿಹಿತ್ಲು, ಸುರೇಶ್ ಪೂಜಾರಿ ಅಂಗಡಿ ಮನೆ ಗಣೇಶ್ ದೇವಾಡಿಗ ಹಾಡಿಮನೆ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವೀಕ್ಷಕ ವಿವರಣೆಗಾರರಾಗಿ ಗಣೇಶ್ ಕೊಠಾರಿ ,ವಿಕ್ರಂ ಪೂಜಾರಿ ಸಸಿಹಿತ್ಲು ,ರಜತ್ ಪೂಜಾರಿ ನಿರ್ವಹಿಸಿದ್ದು, ದಿನೇಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ಪೂಜಾರಿ ಸ್ವಾಗತಿಸಿದರು, ಅರುಣ್ ಗಾಣಿಗ ವಂದಿಸಿದರು. 52 ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಉಳ್ಳೂರು ಕಂಬಳದ ಮೆರಗು ಇಮ್ಮಡಿಯಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಇದನ್ನೂ ಓದಿ : ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ಮೋದಿಯಿಂದ ಕೇಸರಿ ಧ್ವಜಾರೋಹಣ : ಮಂದಿರ ನಿರ್ಮಾಣ ಕಾರ್ಯ ಪೂರ್ಣ



















