ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಎರಡ್ಮೂರು ವಾರಗಳಿಂದಲೂ ಅಲ್ಲಿ ವ್ಯಾಪಕ ಮಳೆಯಾಗುತ್ತಿದೆ (Rain). ಪರಿಣಾಮ ಅಂಕೋಲಾ (Ankola) ತಾಲೂಕಿನ ಶಿರೂರು (Shiruru) ಬಳಿ ಗುಡ್ಡ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ 7 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಟ್ಯಾಂಕರ್ ಚಾಲಕ, ಕ್ಲೀನರ್ ಸೇರಿ 7 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಮಣ್ಣಿನಡಿ ಸಿಲುಕಿರುವವರ ರಕ್ಷಿಸಲು ಸೂಚನೆ ನೀಡಿದ್ದೇನೆ. ಎನ್‌ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.
ವ್ಯಾಪಕ ಮಳೆಯಿಂದಾಗಿ ಈ ಘಟನೆ ನಡೆದಿದೆ. ರಕ್ಷಣಾ ತಂಡ ಶಾಂತಿ ನಾಯ್ಕ(37) ಎನ್ನುವವರ ಮೃತದೇಹವನ್ನು ಮಣ್ಣಿನಿಂದ ಹೊರಕ್ಕೆ ತೆಗೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗುಡ್ಡ ಕುಸಿತವಾದ ಜಾಗದಲ್ಲಿ ಒಂದು ಚಹಾ ಅಂಗಡಿ ಇತ್ತು. ಇಲ್ಲಿ ಕೆಲವರು ಚಹಾ ಸೇವಿಸುತ್ತಿದ್ದರು. ಹೀಗಾಗಿ ಎಷ್ಟು ಜನ ಸಿಲುಕಿದ್ದಾರೆ ಎಂಬ ಮಾಹಿತಿ ಖಚಿತವಾಗಿಲ್ಲ. ವಾಹನ ಚಾಲಕರು ಹಾಗೂ ಕ್ಲೀನರ್ ಅಲ್ಲಿ ಚಹಾ ಸೇವಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಯಾಗಿರುವ ರಾಜು ಎಂಬ ವ್ಯಕ್ತಿ ಘಟನೆ ಕುರಿತು ಮಾತನಾಡಿ, ನನ್ನ ಮುಂದೆ ಕಾರಿನಲ್ಲಿ ಒಂದು ಕುಟುಂಬ ಹೋಗುತ್ತಿತ್ತು. ಹಠಾತ್ ಆಗಿ ಕಾರು ನಿಲ್ಲಿಸಿ ಅವರು ನಿಧಾನಕ್ಕೆ ಹಿಂದೆ ತೆಗೆದುಕೊಳ್ಳುತ್ತಿದ್ದರು. ನಾನು ಇಳಿದು ಬಂದು ನೋಡಿದಾಗ ಗುಡ್ಡ ಕುಸಿಯುತ್ತಿತ್ತು. ಕೂಡಲೇ ನಾನು ಅಲ್ಲಿಂದ ಬೇರೆ ಕಡೆ ಹಾರಿದೆ. ಸ್ವಲ್ಪದರಲ್ಲೇ ನಾನು ಸಾವಿನ ದವಡೆಯಿಂದ ಪಾರಾದೆ. ಅಲ್ಲಿಯೇ ಒಂದು ಟೀ ಅಂಗಡಿ ಇತ್ತು. ಜೊತೆಗೆ ಅಂಗಡಿಯಲ್ಲಿ ನಾಲ್ಕು ಜನ ಇದ್ದರು. ಕಾರು ಮತ್ತು ಟೀ ಅಂಗಡಿಯಲ್ಲಿದ್ದವರು ಸೇರಿ ಸುಮಾರು ಒಂಬತ್ತು ಜನ ಮಣ್ಣಿನಡಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಒಂದೇ ಕುಟುಂಬದ ಐವರ ಮೃತದೇಹಗಳು ಸಿಕ್ಕಿವೆ.