ರಾಂಚಿ : ಜಾರ್ಖಂಡ್ ರಾಜಧಾನಿ ರಾಂಚಿಯ ಅಶೋಕ್ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಜಾರ್ಖಂಡ್ ಹೈಕೋರ್ಟ್‌ನ ವಕೀಲೆಯೊಬ್ಬರ ಕುಟುಂಬವು ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದೆ. ಘಟನೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಪುತ್ರ ಮೃತಪಟ್ಟಿದ್ದಾನೆ. ತಾಯಿ ಮತ್ತು 14 ವರ್ಷದ ಮಗಳ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮೃತಪಟ್ಟ ಯುವಕನನ್ನು ಮಿಹಿರ್ ಅಖೌರಿ ಎಂದು ಗುರುತಿಸಲಾಗಿದೆ. ಮಿಹಿರ್ ಇತ್ತೀಚೆಗಷ್ಟೇ ಕೋಲ್ಕತ್ತಾದಲ್ಲಿ ತನ್ನ ಸಿಎ (Chartered Accountancy) ವ್ಯಾಸಂಗವನ್ನು ಮುಗಿಸಿ ರಾಂಚಿಗೆ ಮರಳಿದ್ದರು. ಅಷ್ಟೇ ಅಲ್ಲದೆ, ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದನು ಎನ್ನಲಾಗಿದೆ. ಆದರೆ, ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿದ್ದ ಯುವಕ ಏಕಾಏಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತಾಯಿ, ತಂಗಿಯ ಸ್ಥಿತಿ ಗಂಭೀರ
ಘಟನೆಯ ವೇಳೆ ಮಿಹಿರ್ ನೇಣಿಗೆ ಶರಣಾಗಿದ್ದರೆ, ಆತನ ತಾಯಿ ಸ್ನೇಹಾ ಅಖೌರಿ ಮತ್ತು 14 ವರ್ಷದ ತಂಗಿ ವಿಷಪೂರಿತ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ನೇಹಾ ಅಖೌರಿ ಅವರು ಜಾರ್ಖಂಡ್ ಹೈಕೋರ್ಟ್‌ನಲ್ಲಿ ವಕೀಲೆಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ನೆರೆಹೊರೆಯವರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮಿಹಿರ್ ಮೃತಪಟ್ಟಿದ್ದರು. ತಾಯಿ ಮತ್ತು ಮಗಳನ್ನು ಕೂಡಲೇ ರಾಂಚಿಯ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರಿಬ್ಬರೂ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ನಿಗೂಢ
ಒಳ್ಳೆಯ ಸಾಮಾಜಿಕ ಗೌರವ ಮತ್ತು ಆರ್ಥಿಕವಾಗಿ ಸದೃಢವಾಗಿದ್ದ ಕುಟುಂಬವೊಂದು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. “ಕುಟುಂಬದ ಸದಸ್ಯರ ನಡುವೆ ಯಾವುದೇ ಕಲಹ ಇರಲಿಲ್ಲ, ಎಲ್ಲವೂ ಸುಗಮವಾಗಿತ್ತು” ಎಂದು ನೆರೆಹೊರೆಯವರು ಹೇಳಿದ್ದಾರೆ.
ರಾಂಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ನೇಹಾ ಅಖೌರಿ ಅಥವಾ ಅವರ ಮಗಳು ಪ್ರಜ್ಞೆ ಬಂದ ನಂತರ ನೀಡುವ ಹೇಳಿಕೆಯೇ ಈ ನಿಗೂಢ ಸಾವಿನ ರಹಸ್ಯವನ್ನು ಬಿಚ್ಚಿಡಬೇಕಿದೆ. ಕೌಟುಂಬಿಕ ಸಮಸ್ಯೆ ಅಥವಾ ವೃತ್ತಿ ಜೀವನದ ಒತ್ತಡವೇನಾದರೂ ಇತ್ತೇ ಎಂಬ ಬಗ್ಗೆಯೂ ಪೊಲೀಸರು ಆಪ್ತರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಧರ್ಮರಾಯಸ್ವಾಮಿ ದೇಗುಲದ ಆಭರಣ ಕದ್ದ ಆರೋಪ | ಮುಜರಾಯಿ ಇಲಾಖೆ EO ನಾಗರಾಜ್ ಅಮಾನತು!


















