ಬೆಂಗಳೂರು\ ಶಿವಮೊಗ್ಗ\ಉ.ಕ | ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 10 ಸಾವಿರ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ‘ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ’ಗೆ ಸಂಬಂಧಿಸಿದಂತೆ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸುವುದಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಈ ಸಂಬಂಧ ಸಾಗರದ ಅಖಿಲೇಶ್ ಚಿಪ್ಲಿ, ಉಡುಪಿಯ ಡಾ. ರವೀಂದ್ರನಾಥ್ ಶಾನಬಾಗ್ ಮತ್ತು ಶಿವಮೊಗ್ಗದ ಸಿ.ಬಿ. ಮನೋಹರ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆ ಸಂಬಂಧ ಶರಾವತಿ ಕಣಿವೆಯ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಅರಣ್ಯ, ವನ್ಯಜೀವಿಗಳಗಳ ಮೇಲೆ ದುಷ್ಪರಿಣಾಮ ಬೀರಲಿದೆ.ಹೀಗಾಗಿ ಯೋಜನೆಯ ಕಾಮಗಾರಿಗೆ ತಡೆ ನೀಡಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ ಕಾಮತ್ “ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಇನ್ನೂ ಸಿಕ್ಕಿಲ್ಲ. ಯೋಜನೆ ಬಗೆಗಿನ ಆತಂಕಗಳ ಪರಿಶೀಲನೆ ಮಾಡಲಾಗುತ್ತಿದೆ” ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇನ್ನು, ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ,ಯಾವುದೇ ಮಧ್ಯಂತರ ತಡೆ ನೀಡದಂತೆ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ಪೀಠ, ಅಭಯಾರಣ್ಯವು ಅಪರೂಪದ ಸಿಂಹಬಾಲದ ಸಿಂಗಲೀಕಗಳ ಸಂರಕ್ಷಿತ ಪ್ರದೇಶವಾಗಿದೆ. ಈ ಯೋಜನೆಯಿಂದ ಅವುಗಳ ಆವಾಸಸ್ಥಾನದ ಮೇಲೆ ಆಗುವ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನ ಅಗತ್ಯವಿದೆ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ. ಈ ಕುರಿತು ಪರಿಶೀಲನೆ ನಡೆಸಬೇಕಾಗಿದ್ದು ಮುಂದಿನ ಆದೇಶದವರೆಗೆ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿತು.
ಇದನ್ನೂ ಓದಿ : 50 ವರ್ಷಗಳ ಬಳಿಕ ಅಮೆರಿಕದಲ್ಲಿ ನೂತನ ತೈಲ ಸಂಸ್ಕರಣಾಗಾರ – ರಿಲಯನ್ಸ್ ಹೂಡಿಕೆ!



















