ಕಲಬುರಗಿ : ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 16ರಂದು RSS ಪಥಸಂಚಲನ (Chittapur RSS March) ನಡೆಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಹೈಕೋರ್ಟ್‌ನ ಕಲಬುರಗಿ ವಿಭಾಗೀಯ ಪೀಠದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ವಾದ-ಪ್ರತಿವಾದ ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ನವೆಂಬರ್ 16ರಂದು ಮಧ್ಯಾಹ್ನ 3.30ರಿಂದ 5.45ರ ಒಳಗಾಗಿ ಪಥಸಂಚಲನ ನಡೆಸಲು ಅನುಮತಿ ನೀಡಿದೆ.
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿರುವ ಬಗ್ಗೆ ಹೈಕೋರ್ಟ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದ್ದು, 300 ಕಾರ್ಯಕರ್ತರು ಹಾಗೂ 25 ಬ್ಯಾಂಡ್ ವಾದಕರಿಗೆ ಮಾತ್ರ ಅವಕಾಶ ಇರಲಿದ್ದು, ಪಥಸಂಚಲನದಲ್ಲಿ ಒಟ್ಟು 325 ಜನರು ಮಾತ್ರ ಭಾಗಿಯಾಗಬೇಕು. ನ.16ರ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಪಥಸಂಚಲನಕ್ಕೆ ಅನುಮತಿ ಕೋರಿ ಆರೆಸ್ಸೆಸ್ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠ ಕಳೆದ ನವೆಂಬರ್ 7ರಂದು ಕೈಗೊಂಡು, ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಪ್ರತ್ಯೇಕ ದಿನಾಂಕ ನಿಗದಿಯಾಗದಿದ್ದರೆ ನ್ಯಾಯಾಲಯವೇ ತೀರ್ಮಾನಿಸಲಿದೆ ಎಂದು ಪೀಠ ತಿಳಿಸಿತ್ತು.
ಹೈಕೋರ್ಟ್ ಆದೇಶದಂತೆ ಮೊದಲು ಕಲಬುರಗಿಯಲ್ಲಿ ಶಾಂತಿ ಸಭೆ ನಡೆದಿತ್ತು. ಆದರೆ, ಯಾವುದೇ ಒಮ್ಮತ ಮೂಡದೆ ಅದು ಅಶಾಂತಿಯಲ್ಲಿ ಅಂತ್ಯವಾಗಿತ್ತು. ನಂತರ ಹೈಕೋರ್ಟ್ ಸೂಚನೆಯಂತೆ ಎಜೆ ಶಶಿಕಿರಣ್ ಶೆಟ್ಟಿ ಅವರ ಬೆಂಗಳೂರಿನ ಕಚೇರಿಯಲ್ಲಿ 2ನೇ ಶಾಂತಿ ಸಭೆ ನಡೆದಿದ್ದು, ಅದು ಫಲಪ್ರದವಾಗಿದೆ ಎಂದು ಕಳೆದ ವಿಚಾರಣೆಯಲ್ಲಿ ತಿಳಿಸಲಾಗಿತ್ತು.
ಬೆಂಗಳೂರಿನ ಸಭೆಯಲ್ಲಿ ಆರ್‌ಎಸ್‌ಎಸ್ ಮುಖಂಡರು ನವೆಂಬರ್ 13 ಅಥವಾ 16ರಂದು ಪಥಸಂಚಲನಕ್ಕೆ ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಹೈಕೋರ್ಟ್ ಇಂದು ಮಧ್ಯಾಹ್ನ ವಿಚಾರಣೆ ನಡೆಸಿ, ನ.16ರಂದು ಪಥಸಂಚಲನ ನಡೆಸಲು ಅಂತಿಮ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ : ಮದುವೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ಸುಧಾಮೂರ್ತಿ, ಕಿರಣ್ ಮಜುಂದಾರ್ ಷಾ | ವಿಡಿಯೋ ವೈರಲ್



















