ದುಬೈ: ಭಾನುವಾರ, ಚಾಂಪಿಯನ್ಸ್ ಟ್ರೋಫಿ 2025ರ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮಹತ್ವದ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿಯತ್ತ ಎಲ್ಲರ ಗಮನವಿರಲಿದೆ.
ಫೆಬ್ರವರಿ 23ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ, ಪ್ರಭಾವಶಾಲಿ ಶತಕ ಸಿಡಿಸಿ, 242 ರನ್ ಗುರಿಯನ್ನು 42.3 ಓವರ್‌ಗಳಲ್ಲಿ ಸುಲಭವಾಗಿ ಚೇಸ್ ಮಾಡಲು ಭಾರತಕ್ಕೆ ನೆರವಾಗಿದ್ದರು. ಅವರ ಅದ್ಭುತ ಬ್ಯಾಟಿಂಗ್‌ಗೆ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯು ಲಭಿಸಿತ್ತು.
ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಕೊಹ್ಲಿ ಈಗಾಗಲೇ ಎರಡು ಪಂದ್ಯಗಳಲ್ಲಿ 122 ರನ್ ಗಳಿಸಿದ್ದು, ಅವರ ಸರಾಸರಿ 122.00 ಆಗಿದೆ. ಅಂದ ಹಾಗೆ ನ್ಯೂಜಿಲೆಂಡ್ ವಿರುದ್ಧ ಹಣಾಹಣಿ ಅವರಿಗೆ 300ನೇ ಒಡಿಐ ಪಂದ್ಯವಾಗಿದೆ. ಈ ಮೂಲಕವೂ ವಿಶೇಷವಾಗಿದೆ. ಈ ವೇಳೆ ಅವರಿಗೆ ಹಲವಾರು ದಾಖಲೆಗಳನ್ನು ಸೃಷ್ಟಿಸುವ ಅವಕಾಶವಿದೆ.
ಕೊಹ್ಲಿ ಸೃಷ್ಟಿಸಬಹುದಾದ ಮೈಲಿಗಲ್ಲುಗಳು ಇಲ್ಲಿವೆ:

- ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತದ ಪರ ಹೆಚ್ಚು ರನ್
ಕೊಹ್ಲಿ ಈಗಾಗಲೇ 15 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ 651 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅವರು ಕನಿಷ್ಠ 51 ರನ್ ಗಳಿಸಿದರೆ, ಶಿಖರ್ ಧವನ್ ಅವರ 701 ರನ್ ದಾಖಲೆಯನ್ನು ಮುರಿದು, ಈ ಟೂರ್ನಿಯ ಇತಿಹಾಸದಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರರಾಗುತ್ತಾರೆ. - ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹೆಚ್ಚು ರನ್
ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ 142 ರನ್ ಗಳಿಸಿದರೆ, ಕ್ರಿಸ್ ಗೇಲ್ (791 ರನ್) ಅವರ ದಾಖಲೆಯನ್ನು ಮುರಿದು, ಚಾಂಪಿಯನ್ಸ್ ಟ್ರೋಫಿ ಇತಿಹಾಸದ ಅತ್ಯಂತ ಹೆಚ್ಚು ರನ್ ಗಳಿಸಿದ ಆಟಗಾರರಾಗುತ್ತಾರೆ. - ನ್ಯೂಜಿಲೆಂಡ್ ವಿರುದ್ಧ ಒಡಿಐಗಳಲ್ಲಿ ಭಾರತದ ಪರ ಹೆಚ್ಚು ರನ್
ಕೊಹ್ಲಿ ಈಗಾಗಲೇ 31 ಒಡಿಐ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ 1,645 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಅವರು 106 ರನ್ ಸೇರಿಸಿದರೆ, ಸಚಿನ್ ತೆಂಡುಲ್ಕರ್ (1,750 ರನ್) ಅವರ ದಾಖಲೆ ಮುರಿದು, ಕಿವೀಸ್ ವಿರುದ್ಧ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರಾಗುತ್ತಾರೆ. - ಒಡಿಐಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಹೆಚ್ಚು ಶತಕಗಳು
36 ವರ್ಷದ ಈ ಆಟಗಾರ ಈಗಾಗಲೇ ನ್ಯೂಜಿಲೆಂಡ್ ವಿರುದ್ಧ 6 ಶತಕಗಳನ್ನು ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಮತ್ತೊಂದು ಶತಕ ಗಳಿಸಿದರೆ, ಅವರು ವಿಶ್ವದ ಮೊಟ್ಟಮೊದಲ ಆಟಗಾರನಾಗಿ, ವಿರೇಂದರ್ ಸೆಹ್ವಾಗ್ ಮತ್ತು ರಿಕ್ಕಿ ಪಾಂಟಿಂಗ್ (6 ಶತಕಗಳು) ಅವರನ್ನು ಮೀರಿಸುವ ಮೂಲಕ ಕಿವೀಸ್ ವಿರುದ್ಧ 7 ಶತಕ ಸಿಡಿಸಿದ ಮೊಟ್ಟಮೊದಲ ಆಟಗಾರರಾಗುತ್ತಾರೆ. - ಚಾಂಪಿಯನ್ಸ್ ಟ್ರೋಫಿ ಮತ್ತು ಐಸಿಸಿ ಒಡಿಐ ಟೂರ್ನಿಯಲ್ಲಿ ಹೆಚ್ಚು 50+ ಮೊತ್ತಗಳು
ಕೊಹ್ಲಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿಯಲ್ಲಿ 6 ಹಾಗೂ ಐಸಿಸಿ ಒಡಿಐ ಟೂರ್ನಿಯಲ್ಲಿ (ವಿಶ್ವಕಪ್ + ಚಾಂಪಿಯನ್ಸ್ ಟ್ರೋಫಿ) 23 ಅರ್ಧಶತಕ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರೆ, ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ 7 ಮತ್ತು ಐಸಿಸಿ ಒಡಿಐ ಟೂರ್ನಿಗಳಲ್ಲಿ ಒಟ್ಟು 24 ಅರ್ಧಶತಕ ದಾಖಲಿಸಿದ ಪ್ರಥಮ ಆಟಗಾರರಾಗುತ್ತಾರೆ.