ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆತ್ಮಚರಿತ್ರೆ “ಐ ಆಮ್ ಜಾರ್ಜಿಯಾ — ಮೈ ರೂಟ್ಸ್, ಮೈ ಪ್ರಿನ್ಸಿಪಲ್ಸ್” (I Am Giorgia — My Roots, My Principles) ಪುಸ್ತಕದ ಭಾರತೀಯ ಆವೃತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನುಡಿ ಬರೆದಿದ್ದಾರೆ. ಮೆಲೋನಿ ಅವರನ್ನು “ದೇಶಭಕ್ತೆ ಮತ್ತು ಅತ್ಯುತ್ತಮ ಸಮಕಾಲೀನ ನಾಯಕಿ” ಎಂದು ಶ್ಲಾಘಿಸಿರುವ ಮೋದಿ, ಅವರ ವೈಯಕ್ತಿಕ ಮತ್ತು ರಾಜಕೀಯ ಪಯಣವು ಭಾರತೀಯರಿಗೆ ಹೆಚ್ಚು ಆಪ್ತವಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮದೇ ಜನಪ್ರಿಯ ರೇಡಿಯೋ ಕಾರ್ಯಕ್ರಮದ ಶೈಲಿಯಲ್ಲಿ, ಪ್ರಧಾನಿ ಮೋದಿ ಅವರು ಮೆಲೋನಿ ಅವರ ಆತ್ಮಚರಿತ್ರೆಯನ್ನು ಅವರ “ಮನ್ ಕಿ ಬಾತ್” ಎಂದು ಬಣ್ಣಿಸಿದ್ದಾರೆ. ಶೀಘ್ರದಲ್ಲೇ ಭಾರತದಲ್ಲಿ ರೂಪಾ ಪಬ್ಲಿಕೇಷನ್ಸ್‌ನಿಂದ ಬಿಡುಗಡೆಯಾಗಲಿರುವ ಈ ಪುಸ್ತಕಕ್ಕೆ ಮುನ್ನುಡಿ ಬರೆಯುವುದು “ದೊಡ್ಡ ಗೌರವ” ಎಂದು ಮೋದಿ ಹೇಳಿದ್ದಾರೆ. “ಪ್ರಧಾನಿ ಮೆಲೋನಿ ಅವರ ಮೇಲಿನ ಗೌರವ, ಮೆಚ್ಚುಗೆ ಮತ್ತು ಸ್ನೇಹದಿಂದ ನಾನು ಈ ಮುನ್ನುಡಿಯನ್ನು ಬರೆಯುತ್ತಿದ್ದೇನೆ” ಎಂದು ತಿಳಿಸಿರುವ ಅವರು, ಮೆಲೋನಿ ಅವರ “ಸ್ಫೂರ್ತಿದಾಯಕ ಮತ್ತು ಐತಿಹಾಸಿಕ” ಪಯಣವನ್ನು ಭಾರತದಲ್ಲಿ ಉತ್ತಮವಾಗಿ ಸ್ವೀಕರಿಸಲಾಗುವುದು ಎಂದಿದ್ದಾರೆ.
ತಮ್ಮ ಮುನ್ನುಡಿಯಲ್ಲಿ ಮೋದಿ, “ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿಕೊಳ್ಳುತ್ತಲೇ, ಜಗತ್ತಿನೊಂದಿಗೆ ಸಮಾನ ನೆಲೆಯಲ್ಲಿ ತೊಡಗಿಸಿಕೊಳ್ಳುವ ಅವರ ನಂಬಿಕೆಯು ನಮ್ಮದೇ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಬರೆದಿದ್ದಾರೆ. ಅಂದಹಾಗೆ, ಈ ಪುಸ್ತಕದ ಅಮೆರಿಕ ಆವೃತ್ತಿಗೆ ಡೊನಾಲ್ಡ್ ಟ್ರಂಪ್ ಜೂನಿಯರ್(ಟ್ರಂಪ್ ಅವರ ಪುತ್ರ) ಮುನ್ನುಡಿ ಬರೆದಿದ್ದಾರೆ.

ಪುಸ್ತಕದಲ್ಲಿ ಏನಿದೆ?
ಮೂಲತಃ ಇಟಲಿಯಲ್ಲಿ ಪ್ರಕಟವಾದ ಮೆಲೋನಿ ಅವರ ಆತ್ಮಚರಿತ್ರೆಯು ಅವರ ವೈಯಕ್ತಿಕ ಜೀವನ ಮತ್ತು ರಾಜಕೀಯ ಏಳಿಗೆಯನ್ನು ಮುಕ್ತವಾಗಿ ಕಟ್ಟಿಕೊಡುತ್ತದೆ. ಪುಸ್ತಕದಲ್ಲಿ ಅವರು ತಮ್ಮ ಮೂಲ, ರೋಮ್‌ನ ಗರ್ಬಟೆಲ್ಲಾ ಬಡಾವಣೆಯಲ್ಲಿನ ಬಾಲ್ಯ, ಕುಟುಂಬದ (ತಾಯಿ ಅನ್ನಾ, ಸಹೋದರಿ ಅರಿಯಾನ್ನ, ಅಜ್ಜ-ಅಜ್ಜಿ ಮಾರಿಯಾ ಮತ್ತು ಗಿಯಾನಿ) ಪ್ರಭಾವ ಹಾಗೂ ತಂದೆಯ ಅನುಪಸ್ಥಿತಿಯ ನೋವಿನ ಬಗ್ಗೆ ಬರೆದುಕೊಂಡಿದ್ದಾರೆ.
ಹದಿಹರೆಯದಲ್ಲೇ ರಾಜಕೀಯದ ಬಗ್ಗೆ ಬೆಳೆದ ಆಸಕ್ತಿ, ಮಂತ್ರಿಯಾಗಿ ಅವರ ಪಯಣ, ‘ಫ್ರೆಟೆಲ್ಲಿ ಡಿ’ಇಟಾಲಿಯಾ’ ಮತ್ತು ಯುರೋಪಿಯನ್ ಕನ್ಸರ್ವೇಟಿವ್ಸ್ ಪಕ್ಷದ ನಾಯಕತ್ವ ಹಾಗೂ ಅಂತಿಮವಾಗಿ ಇಟಲಿಯ ಅತ್ಯುನ್ನತ ರಾಜಕೀಯ ಹುದ್ದೆಗೇರಿದ ಹಾದಿಯನ್ನು ಪುಸ್ತಕವು ವಿವರಿಸುತ್ತದೆ. ಇದರೊಂದಿಗೆ, ತಮ್ಮ ಸಂಗಾತಿ ಆಂಡ್ರಿಯಾ ಮತ್ತು ಮಗಳು ಗಿನೆವ್ರಾ ಅವರೊಂದಿಗಿನ ಸಂಬಂಧ, ಮಾತೃತ್ವ, ನಂಬಿಕೆ, ಅಸ್ಮಿತೆ ಹಾಗೂ ಇಟಲಿ ಮತ್ತು ಯುರೋಪ್‌ಗಾಗಿ ತಮ್ಮ ದೃಷ್ಟಿಕೋನದ ಬಗ್ಗೆಯೂ ಮೆಲೋನಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.