ಯಾದಗಿರಿ: ಮಹಾರಾಷ್ಟ್ರದ ಕೃಷ್ಣ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆ ಭೀಮಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಯಾದಗಿರಿ ನಗರದ ಹೊರವಲಯದ ಭೀಮಾ ನದಿ ತಟದಲ್ಲಿರುವ ವೀರಾಂಜನೇಯ ಹಾಗೂ ಕಂಗಳೇಶ್ವರ ದೇಗುಲ ಸಂಪೂರ್ಣ ಮುಳುಗಡೆಗೊಂಡಿವೆ. ಶ್ರಾವಣ ಮಾಸ ಹಿನ್ನೆಲೆ ಅಪಾರ ಪ್ರಮಾಣದಲ್ಲಿ ಭಕ್ತರ ದಂಡು ಹರಿದು ಬರುತ್ತಿದ್ದು, ದೇವಸ್ಥಾನಕ್ಕೆ ಜಲದಿಗ್ಬಂಧನ ಎದುರಾಗಿರುವುದನ್ನು ಕಂಡು ಭಕ್ತರಲ್ಲಿ ಆತಂಕ ಮನೆ ಮಾಡಿದೆ. ದೂರದಿಂದಲೇ ದೇವರ ದರ್ಶನ ಪಡೆದು ಭಕ್ತರು ಹಿಂದಿರುಗುತ್ತಿದ್ದಾರೆ.
ಮಹಾರಾಷ್ಟ್ರದ ಉಜನಿ ಜಲಾಶದಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ವಡಗೇರಾ ತಾಲೂಕಿನ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ 45 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಮತ್ತೊಂದೆಡೆ ಭೀಮಾನದಿಯ ಎಡ ಮತ್ತು ಬಲದಂಡೆ ರೈತರಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.