ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಸೋಮವಾರ ರಾತ್ರಿ ಏಕಾಏಕಿ ಸುರಿದ ಭಾರೀ ಮಳೆಯಿಂದ ಸಹಸ್ರಧಾರಾ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, 4 ಮಂದಿ ಮೃತಪಟ್ಟಿದ್ದಾರೆ. ತಪೋವನ್ ಪ್ರದೇಶದ ಅನೇಕ ಮನೆಗಳು ಮುಳುಗಡೆಯಾಗಿದ್ದರೆ, ಸಹಸ್ರಧಾರಾ ಹಾಗೂ ಐಟಿ ಪಾರ್ಕ್ ಪ್ರದೇಶಗಳು ಜಲಾವೃತಗೊಂಡಿವೆ. ಈ ದುರಂತದಲ್ಲಿ ಇಬ್ಬರು ಕಾಣೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಮೇಘಸ್ಫೋಟದ ಹಿನ್ನೆಲೆಯಲ್ಲಿ ಕಾರ್ಲಿಗಾಡ್ ಹೊಳೆ ಉಕ್ಕಿ ಹರಿದು ಸುತ್ತಮುತ್ತಲೂ ಭಾರೀ ಹಾನಿ ಮಾಡಿದ್ದು, ಪ್ರಮುಖ ಸೇತುವೆಯೊಂದು ಕುಸಿದುಬಿದ್ದಿದೆ. ಹೊಳೆ ತೀರದ ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯಾಗಿದೆ. ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಸಹಸ್ರಧಾರಾ ಪ್ರದೇಶದಲ್ಲಿ ಕೆಲವು ಅಂಗಡಿಗಳಿಗೆ ಧಾರಾಕಾರ ಮಳೆಯಿಂದಾಗಿ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ನಾನೇ ಸ್ವತಃ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಧಾಮಿಯವರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಕಡೆಯಿಂದ ಎಲ್ಲ ರೀತಿಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ದೂರವಾಣಿ ಮೂಲಕ ಧಾಮಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಜಿಲ್ಲಾಡಳಿತದಿಂದ ತುರ್ತು ಕಾರ್ಯಾಚರಣೆ
ಜಿಲ್ಲಾಧಿಕಾರಿ ಸವಿನ್ ಬನ್ಸಾಲ್, ಉಪವಿಭಾಗಾಧಿಕಾರಿ ಕುಂಕುಮ್ ಜೋಶಿ ಹಾಗೂ ಇತರ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ಮಾಡಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸಿಪಿಡಬ್ಲ್ಯುಡಿ ಪಡೆಗಳು ಬುಲ್ಡೋಜರ್‌ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಕಾಣೆಯಾಗಿರುವ ಇಬ್ಬರನ್ನು ಪತ್ತೆಹಚ್ಚಲು ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಪರಿಸ್ಥಿತಿಯ ಗಂಭೀರತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಡೆಹ್ರಾಡೂನ್‌ನ 1ರಿಂದ 12ನೇ ತರಗತಿ ವರೆಗಿನ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಿದ್ದಾರೆ.
ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಚಮೋಲಿ ಜಿಲ್ಲೆಯ ದೇವಲ್ ತಾಲೂಕಿನ ಮೋಪಟಾ ಗ್ರಾಮದಲ್ಲೂ ಮೇಘಸ್ಫೋಟ ಸಂಭವಿಸಿ ಇಬ್ಬರು ಕಾಣೆಯಾಗಿದ್ದರು. ಆ ಸಂದರ್ಭದಲ್ಲೂ ಮನೆಗಳು, ಅಂಗಡಿ ಮುಂಗಟ್ಟುಗಳು ಕೊಚ್ಚಿಹೋಗಿದ್ದವು. ಗೋಶಾಲೆಗಳು ಹಾನಿಗೊಳಗಾಗಿ 15-20 ಪಶುಗಳು ಭೂಸಮಾಧಿಯಾಗಿದ್ದವು.
ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಡೆಹ್ರಾಡೂನ್‌ಗೆ ಭೇಟಿ ನೀಡಿ ಪ್ರವಾಹಪೀಡಿತ ಪ್ರದೇಶಗಳ ಸ್ಥಿತಿಗತಿ ಪರಿಶೀಲಿಸಿ, 1,200 ಕೋಟಿ ರೂ. ನೆರವನ್ನೂ ಘೋಷಿಸಿದ್ದರು. ಅಷ್ಟರಲ್ಲೇ ಡೆಹ್ರಾಡೂನ್ ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ.


















