ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 12 ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.
ಭಾರೀ ಮಳೆಯಿಂದಾಗಿ ಕೊತ್ತನೂರು- ಹೆಣ್ಣೂರು ಕ್ರಾಸ್ ಸಂಪೂರ್ಣ ಮುಳುಗಡೆಯಾಗಿದೆ. ಮನೆ ಹಾಗೂ ಮನೆಯ ಹೊರಗೆ ಸಂಪೂರ್ಣವಾಗಿ ನೀರು ಆವರಿಸಿದೆ. ಹೀಗಾಗಿ ಜನರಿಗೆ ಜಲ ಸಂಕಷ್ಟ ಎದುರಾಗಿದ್ದು, ಜನ ಪರದಾಟ ನಡೆಸುವಂತಾಗಿದೆ.
ರಾಜ್ಯದಲ್ಲಿ ಮೇ 22ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಾಯಿ ಲೇಔಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ರಾತ್ರಿಯಿಡೀ ಸುರಿದ ಮಳೆಗೆ ಲೇಔಟ್ ಪೂರ್ತಿ ಜಲಾವೃತವಾಗಿದೆ. ಮೊಣಕಾಲವರೆಗೂ ನೀರು ತುಂಬಿದ್ದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನೆಯ ಒಳಗಡೆಯೂ ನೀರು ತುಂಬಿದ್ದು, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.