ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ಎಡೆಬಿಡದ ಮಳೆಯಾಗುತ್ತಿದ್ದು, ಪರಿಣಾಮವೆಂಬಂತೆ ಮೂಸಿ ನದಿ ಉಕ್ಕಿ ಹರಿಯುತ್ತಿದ್ದು, ಹೈದರಾಬಾದ್‌ನ ಹಲವು ಭಾಗಗಳು ಜಲಾವೃತಗೊಂಡಿವೆ. ಉಸ್ಮಾನ್ ಸಾಗರ್ ಮತ್ತು ಹಿಮಾಯತ್ ನಗರ್ ಜಲಾಶಯಗಳ ಗೇಟ್‌ಗಳನ್ನು ತೆರೆದಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದ್ದು, ಹಳೆಯ ನಗರ ಸೇರಿದಂತೆ ತಗ್ಗು ಪ್ರದೇಶಗಳು ಅಪಾಯದಲ್ಲಿವೆ.
ಮೂಸಿ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದು ಸ್ಥಳೀಯರನ್ನು ಆತಂಕಕ್ಕೆ ನೂಕಿದೆ. ಮೂಸಾರಾಂಬಾಗ್‌ನಲ್ಲಿ ನದಿ ತೀರದ ಕಾಲೋನಿಗಳಿಗೆ ಈಗಾಗಲೇ ಪ್ರವಾಹದ ನೀರು ನುಗ್ಗಿದೆ. ಇದೇ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯು ಕುಸಿಯುವ ಭೀತಿ ಎದುರಾಗಿದ್ದು, ಸೇತುವೆಯ ಸೆಂಟರಿಂಗ್ ಉಪಕರಣಗಳು ಈಗಾಗಲೇ ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ.

ಮಹಾತ್ಮ ಗಾಂಧಿ ಬಸ್ ನಿಲ್ದಾಣ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಬಸ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ನಿಲ್ದಾಣದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಪರಿಶೀಲನೆ
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸುತ್ತಿದ್ದಾರೆ. ಶುಕ್ರವಾರ ರಾತ್ರಿಯೇ ತಗ್ಗು ಪ್ರದೇಶಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ.
ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಕರೆ ಮಾಡಿ, ಎಂಜಿಬಿಎಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮತ್ತು ಬೇರೆ ಪ್ರದೇಶಗಳಿಂದ ಬರುವ ಬಸ್‌ಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲು ಸೂಚನೆ ನೀಡಿದರು.
ದಸರಾ-ದುರ್ಗಾ ಪೂಜೆ ಸೇರಿದಂತೆ ಇದು ಹಬ್ಬಗಳ ಸೀಸನ್ ಆಗಿರುವುದರಿಂದ, ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ಊರುಗಳನ್ನು ತಲುಪಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TGSRTC) ಅಧಿಕಾರಿಗಳಿಗೆ ಅವರು ಆದೇಶಿಸಿದ್ದಾರೆ.
ಹವಾಮಾನ ಇಲಾಖೆಯು ಭಾರಿ ಮಳೆಯ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಪೊಲೀಸ್, ಸಂಚಾರ ಪೊಲೀಸ್, ಪಾಲಿಕೆ ಮತ್ತು ವಿದ್ಯುತ್ ಇಲಾಖೆಗಳನ್ನು ಕಟ್ಟೆಚ್ಚರದಲ್ಲಿರುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಎಲ್ಲಾ ಇಲಾಖೆಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.
ನಗರದಲ್ಲಿ ನೀರು ನಿಂತಿರುವ ಸ್ಥಳಗಳಲ್ಲಿ ಮತ್ತು ಮೂಸಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಡೆಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಂಚಾರ ಮಾರ್ಗಗಳನ್ನು ಬದಲಾಯಿಸಲು ಅವರು ಸಲಹೆ ನೀಡಿದ್ದಾರೆ.