ಬೆಂಗಳೂರು: ಕಳೆದ ರಾತ್ರಿ ನಗರದ ಬಹುತೇಕ ಕಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವಾರು ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು, ಬ್ರ್ಯಾಂಡ್ ಬೆಂಗಳೂರಿನ ಬಣ್ಣ ಬಯಲಾಗಿದೆ. ರಾಯಸಂದ್ರದಿಂದ ಚೂಡಸಂದ್ರದ ಕಡೆಗೆ, ವರ್ತೂರಿನಿಂದ ಗುಂಜೂರು ಕಡೆಗೆ, ಐಟಿಐ ಗೇಟ್‌ನಿಂದ ಕಸ್ತೂರಿನಗರ ಕಡೆಗೆ, ವೀರಸಂದ್ರದಿಂದ ಹುಸ್ಕೂರು ಗೇಟ್ ಕಡೆಗೆ, ಹೆಬ್ಬಾಳದಿಂದ ವಿಮಾನ ನಿಲ್ದಾಣದ ಕಡೆಗೆ, ಬೊಮ್ಮನಹಳ್ಳಿಯಿಂದ ರೂಪೇನ ಅಗ್ರಹಾರ ಕಡೆಗೆ, ಅಯ್ಯಪ್ಪ ಅಂಡರ್‌ಪಾಸ್ ಮಡಿವಾಳದಿಂದ ಎಸ್‌ಪಿ ರಸ್ತೆಯ ಕಡೆಗೆ ಹೋಗುವ ಮಾರ್ಗಗಳು ಜಲಾವೃತವಾಗಿವೆ. ಈ ಹಿನ್ನೆಲೆ ಸಂಚಾರ ದಟ್ಟಣೆಯೂ ಇರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮುಂದಿನ 3 ಗಂಟೆ ಆರೇಂಜ್ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು,. ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.