ಬೆಂಗಳೂರು : ಇನ್ನೂ ಕೆಲವು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ನಾಳೆ 28 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ 3-4 ದಿನಗಳಿಂದ ಅಬ್ಬರಿಸುತ್ತಿದ್ದ ವರುಣ ಕೊಂಚ ಶಾಂತವಾಗಲಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗಲಿದೆ. ಆದರೆ ಗಾಳಿಯ ಪ್ರಮಾಣ ಹೆಚ್ಚಿರಲಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.
ಉತ್ತರ ಒಳನಾಡು ಭಾಗಕ್ಕೆ ಹೋಲಿಸಿದರೆ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ನಾಳೆ ಹೆಚ್ಚು ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಗಾಳಿ ನಿರೀಕ್ಷಿಸಲಾಗಿದೆ. ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹವಾಮಾನ ಇಲಾಖೆ ಸೂಚನೆಯಂತೆ 50ಕ್ಕೂ ಹೆಚ್ಚು ಮೀನುಗಾರಿಕೆ ಬೋಟ್ಗಳು ಬಂದರಿಗೆ ವಾಪಸ್ ಆಗಿದ್ದು, ನೂರಾರು ಮೀನುಗಾರಿಕೆ ಬೋಟ್ಗಳು ಬಂದರಿನಲ್ಲಿ ಲಂಗರು ಹಾಕಿವೆ.
ಹವಾಮಾನ ವೈಪರೀತ್ಯದಿಂದ ಈ ವರ್ಷ ತಡವಾಗಿ ಮೀನುಗಾರಿಕೆ ಆರಂಭ ಆಗಿರುವ ನಡುವೆ ವಾಯುಭಾರ ಕುಸಿತದಿಂದ ಚಟುವಟಿಕೆಗೆ ಮತ್ತೆ ಬ್ರೇಕ್ ಬಿದ್ದಿದೆ. ನೆರೆಯ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲೂ ಸಾಧಾರಣ ಮಳೆಯ ನಿರೀಕ್ಷೆ ಇದೆ.
ರಾಜಧಾನಿ ಬೆಂಗಳೂರಲ್ಲೂ ನಾಳೆ ಮಳೆಯಾಗಲಿದ್ದು, ಬೆಳ್ಳಂಬೆಳಗ್ಗೆ ವರುಣ ತಂಪೆರೆಯುವ ನಿರೀಕ್ಷೆ ಇದೆ. ಮಧ್ಯಾಹ್ನದ ವೇಳೆಯೂ ಸಾಧಾರಣ ಮಳೆ ಅಂದಾಜಿಸಲಾಗಿದ್ದು, ಗಾಳಿಯ ವೇಗ ಗಂಟೆಗೆ 6-12 ಕಿ.ಮೀ. ಇರಲಿದೆ. ನಗರದ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



















