ಬೆಂಗಳೂರು: ರಾಜ್ಯದಲ್ಲಿ ಮಳೆರಾಯನ ಅಬ್ಬರ ಮೂರು ತಿಂಗಳಾದರೂ ಕಡಿಮೆಯಾಗುತ್ತಿಲ್ಲ. ಹಲವೆಡೆ ಮಳೆಯಿಂದ ಸಾಕಷ್ಟು ಅವಾಂತರಗಳು ನಡೆದು ಜನ – ಜೀವ ಸಂಪೂರ್ಣ ಅಸ್ತವ್ಯಸ್ಥವಾದರೂ ಮಳೆ ಬೆಂಬಿಡದೆ ಕಾಡುತ್ತಿದೆ. ಶನಿವಾರ ಕೂಡ ರಾಜ್ಯದ ಬರೋಬ್ಬರಿ 11 ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸುರಿಯುವ ಸಾಧ್ಯತೆ ಇದ್ದು, ಎಚ್ಚರವಾಗಿರುವಂತೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧೆಡೆ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹನ್ನೊಂದು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಯಾದಗಿರಿ ಹಾಗೂ ರಾಯಚೂರು ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಒಳನಾಡಿನ ಚಿತ್ರದುರ್ಗ, ತುಮಕೂರು, ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಮಳೆಯೊಂದಿಗೆ ಭಾರೀ ಗಾಳಿ ಬೀಸುವ ಸಾಧ್ಯತೆಯನ್ನು ಕೂಡ ಹವಾಮಾನ ಇಲಾಖೆ ನೀಡಿದೆ. ಅಷ್ಟೇ ಅಲ್ಲದೇ, ಈ ಜಿಲ್ಲೆಗಳನ್ನು ಹೊರತುಪಡಿಸಿ ಒಳನಾಡಿನ ಇನ್ನುಳಿದ ಬಹುತೇಕ ಜಿಲ್ಲೆಗಳಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಲ್ಲದೇ, ಭಾನುವಾರವೂ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗ ಮತ್ತು ಉತ್ತರ ಒಳನಾಡಿನ ಕೆಲವೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭಾನುವಾರ 9 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಈ ವೀಕೆಂಡ್ ನಲ್ಲಿ ಎರಡು ದಿನಗಳು ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಹೇಳಿದೆ.