ಗುರುಗ್ರಾಮ: ಉತ್ತರ ಭಾರತದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿ ದೆಹಲಿ-ಎನ್‌ಸಿಆರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುರುಗ್ರಾಮದ ರಸ್ತೆಗಳು ಜಲಾವೃತವಾಗಿದ್ದು, ದೆಹಲಿ-ಗುರುಗ್ರಾಮ ಎಕ್ಸ್‌ಪ್ರೆಸ್‌ವೇಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಚಾರ ದಟ್ಟಣೆಯಿಂದ ಕಂಗೆಟ್ಟ ಪ್ರಯಾಣಿಕರು, ಸಂಚಾರ ಪೊಲೀಸರಿಗೆ ಸುಮಾರು 200ಕ್ಕೂ ಹೆಚ್ಚು ಸಂಕಷ್ಟದ ಕರೆಗಳನ್ನು ಮಾಡಿದ್ದಾರೆ. ಇನ್ನೊಂದೆಡೆ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಂಗಳವಾರ ಬೆಳಕಾಗುವಷ್ಟರಲ್ಲಿ ಯಮುನಾ ಪ್ರವಾಹದ ನೀರು ಹಲವು ಮನೆಗಳಿಗೆ ನುಗ್ಗಿವೆ. ಅನೇಕ ರಸ್ತೆಗಳು ಜಲಾವೃತವಾಗಿವೆ.
ದಿನವಿಡೀ ಸುರಿದ ಮಳೆಯಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದ್ದು, ಹಲವಾರು ಪ್ರಮುಖ ರಸ್ತೆಗಳು ಮತ್ತು ಜಂಕ್ಷನ್‌ಗಳಲ್ಲಿ ನೀರು ನಿಂತಿದೆ. ಇದರಿಂದಾಗಿ ಪ್ರಯಾಣಿಕರು ಗಂಟೆಗಟ್ಟಲೆ ವಾಹನಗಳ ಸಾಲಿನಲ್ಲಿ ಸಿಲುಕಿಕೊಳ್ಳುವಂತಾಯಿತು.
ಸೋಮವಾರ ಸಂಜೆ 7:30ರ ಹೊತ್ತಿಗೆ, ಗುರುಗ್ರಾಮ ಸಂಚಾರ ಪೊಲೀಸ್ ಸಹಾಯವಾಣಿಗೆ ಸುಮಾರು 200 ಕರೆಗಳು ಬಂದಿವೆ. ದಾರಿಯಲ್ಲಿ ಕೆಟ್ಟುನಿಂತ ವಾಹನಗಳನ್ನು ಸರಿಸಲು ಸಹಾಯ ಕೋರಿ ಮತ್ತು ಪರ್ಯಾಯ ಮಾರ್ಗಗಳ ಬಗ್ಗೆ ವಿಚಾರಿಸಲು ಜನರು ಕರೆ ಮಾಡಿದ್ದಾರೆ. 25ಕ್ಕೂ ಹೆಚ್ಚು ವಾಹನಗಳು ಕೆಟ್ಟುನಿಂತ ಪರಿಣಾಮ, ಸಂಚಾರ ದಟ್ಟಣೆ ಮತ್ತಷ್ಟು ಉಲ್ಬಣಗೊಂಡಿತ್ತು.

ಜಲಾವೃತಗೊಂಡ ಪ್ರಮುಖ ಪ್ರದೇಶಗಳು
ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇ ಬಳಿಯ ರಾಜೀವ್ ಚೌಕ್, ಖುಶಾಲ್ ಚೌಕ್, ಮಹಾವೀರ್ ಚೌಕ್ ಬಸ್ ನಿಲ್ದಾಣ, ಗುರುಗ್ರಾಮ ರೈಲ್ವೆ ನಿಲ್ದಾಣ ರಸ್ತೆ, ಶೀತಲಾ ಮಾತಾ ಮಂದಿರ ರಸ್ತೆ, ವಾತಿಕಾ ಚೌಕ್, ಮತ್ತು ಗಾಲ್ಫ್ ಕೋರ್ಸ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು.
ಗುರುಗ್ರಾಮದಲ್ಲಿ ಆರೆಂಜ್ ಅಲರ್ಟ್
ಮಂಗಳವಾರವೂ ಗುರುಗ್ರಾಮದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಭಾರತೀಯ ಹವಾಮಾನ ಇಲಾಖೆ (IMD) ‘ಆರೆಂಜ್ ಅಲರ್ಟ್’ ಘೋಷಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಕೆಲವು ಪೀಡಿತ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಖಾಸಗಿ ಕಚೇರಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (ವರ್ಕ್ ಫ್ರಮ್ ಹೋಮ್) ಸೂಚಿಸಲಾಗಿದೆ.
ರಾಜಕೀಯ ಕೆಸರೆರಚಾಟ
ಈ ಪರಿಸ್ಥಿತಿಯ ಬಗ್ಗೆ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. “3 ಗಂಟೆ ಮಳೆಗೆ ಗುರುಗ್ರಾಮ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರು 5-6 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಇದು ಬಿಜೆಪಿ ಸರ್ಕಾರದ ಅಸಾಮರ್ಥ್ಯ ಮತ್ತು ವಿಫಲ ಯೋಜನೆಗೆ ಸಾಕ್ಷಿ,” ಎಂದು ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಟೀಕಿಸಿದ್ದಾರೆ.

ಕಾಂಗ್ರೆಸ್‌ನ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯಿಸಿ, “2 ಗಂಟೆ ಮಳೆಗೆ 20 ಕಿ.ಮೀ ಜಾಮ್! ಮುಖ್ಯಮಂತ್ರಿಗಳು ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಾರೆ, ರಸ್ತೆಯಲ್ಲಿ ಪ್ರಯಾಣಿಸುವುದಿಲ್ಲ. ಚರಂಡಿ ಮತ್ತು ಸಂಚಾರ ದಟ್ಟಣೆ ನಿವಾರಣೆಗೆ ಖರ್ಚು ಮಾಡಿದ ಕೋಟಿ ಕೋಟಿ ಹಣ ಏನಾಯಿತು?” ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಕ್ರಮ
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ಪ್ರವಾಹ ಪೀಡಿತ ಪಂಜಾಬ್‌ನಿಂದ ಹರಿಯಾಣಕ್ಕೆ ಬರುವ ಜನರಿಗೆ ತಕ್ಷಣವೇ ವಸತಿ, ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತೆ ಅವರು ಸೂಚಿಸಿದ್ದಾರೆ.