ಸಾವು ಯಾವಾಗ ಎಲ್ಲಿ? ಹೇಗೆ? ಯಾಕೆ ಬರುತ್ತೆ ಅಂತಾ ಯಾರೊಬ್ಬರಿಂದಲೂ ಊಹಿಸಲು ಸಾಧ್ಯವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೃದಯಾಘಾತವೆನ್ನೋ ಭೂತ ಅತಿ ಕಡಿಮೆ ಪ್ರಾಯದವರನ್ನು ಬೇಟಿಯಾ ಮಾಡುತ್ತಿರುವುದು ನಿಜಕ್ಕೂ ಅಘಾತಕಾರಿ.
ತೀರಾ ಇತ್ತೀಚೆಗೆ ಕರ್ನಾಟಕದಲ್ಲೇ 23, 24 ವರ್ಷದ ಯುವಕರು ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದಾರೆ. ಆರಂಭದಲ್ಲಿ ಕೊವಿಡ್ ಲಸಿಕೆಯೇ ಈ ಆಘಾತಕಾರಿ ಸಾವುಗಳಿಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ, ವೈದ್ಯಕೀಯ ಲೋಕವೇ ಇದನ್ನ ತಳ್ಳಿ ಹಾಕಿತ್ತು. ಈ ಹೃದಯಾಘಾತ ಆಗುವ ಮುನ್ಸೂಚನೆ ಮನುಷ್ಯರಿಗೆ ಮೊದಲೇ ಸಿಕ್ಕಿರುತ್ತಾ.
ಹೌದು! ಈ ಭೂತ ಆವರಿಸುವ ಮುನ್ನವೇ ಎಚ್ಚರಿಕೆ ನೀಡಿರುತ್ತೆ ಎನ್ನವುದನ್ನು ವೈದ್ಯಲೋಕವೂ ದೃಢ ಪಡಿಸಿದೆ.

ಹೃದಯಾಘಾತಕ್ಕೆ 1 ತಿಂಗಳು ಮುನ್ನವೇ ಮುನ್ಸೂಚನೆ
ನಿಜಕ್ಕೂ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಮಹತ್ವದ ವಿಚಾರವಿದು. ಅದು ಹೆಣ್ಣು ಮಕ್ಕಳೇ ಆಗರಲಿ, ಗಂಡು ಮಕ್ಕಳೇ ಆಗಿರಲಿ, ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಈ ದೊಡ್ಡ ವಿಚಾರವನ್ನು ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಲೇಬೇಕು. ಯಾಕೆಂದ್ರೆ ಈ ಅಂಶಗಳು ನಿಮಗೆ ತಿಳಿದಿದ್ದರೆ ಎದುರಾಗುವ ಜವರಾಯನನ್ನು ಹಿಮ್ಮೆಟ್ಟಿಸಬಹುದಾಗಿದೆ. ಹೃದಯಾಘಾತವಾಗುವ ಮುನ್ನ ಅಂದ್ರೆ 1 ತಿಂಗಳ ಮುಂಚೆಯೇ ಪ್ರತಿಯೊಬ್ಬರಿಗೂ ಕೆಲವು ಮುನ್ಸೂಚನೆಗಳನ್ನು ಸಿಕ್ಕಿರುತ್ತವೆ. ಅಂತಹ 6 ಮುನ್ಸೂಚನೆಗಳನ್ನು ಇಲ್ಲಿ ಹೇಳುತ್ತಿದ್ದೇವೆ.
ಅತಿಯಾದ ಪ್ರಮಾಣದ ಬಳಲುವಿಕೆ
ಹೌದು…ದೇಹ ದಣಿಯುವಂಥಾ ಕೆಲಸ ಮಾಡದಿದ್ದರೂ ಸುಸ್ತಾಗುತ್ತಿರುವಂತೆ ಅನಿಸುತ್ತದೆ. ಇದು ಹೃದಯಾಘಾತದ ಮೊದಲ ಮುನ್ಸೂಚನೆ, ದೇಹ ಶ್ರಮಿವಿಲ್ಲದಿದ್ರೂ ಅತಿಯಾದ ಬಳಲುವಿಕೆ ಮುಂದಾಗಬಹುದಾದ ಅನಾಹುತದ ಮೊದಲ ಮುನ್ಸೂಚನೆಯಾಗಿರಬಹುದು.

ಸರಾಗ ಉಸಿರಾಟದಲ್ಲಿ ವ್ಯತ್ಯಯ
ದಣಿಯದಿದ್ದರೂ ಉಸಿರಾಟದಲ್ಲಿ ಏನೋ ಏರುಪೇರು. ಹೌದು. ಸಹಜ ಉಸಿರಾಟ ಪ್ರಕ್ರಿಯೆಯಲ್ಲಿ ವ್ಯತ್ಯಯವಾದರೂ ಅದು ನಿಮ್ಮ ಜೀವಕ್ಕೆ ಸಂಚಕಾರ ತರಬಹುದು. ಉಸಿರಾಟಕ್ಕೆ ಕಷ್ಟ ಅನ್ನಿಸುತ್ತಿದ್ದರೆ ಆ ಕೂಡಲೇ ವೈದ್ಯರನ್ನು ಸಂಪರ್ಕಿಸೋದು ಒಳಿತು.
ನಿದ್ರೆ ಬಾರದೆ ಬಳಲುವುದು
ಇನ್ನೊಂದೆ ದೊಡ್ಡ ಮುನ್ಸೂಚನೆ ಎಂದರೆ ಅದು ನಿದ್ದೆ ಬಾರದಿರುವಿಕೆ. ದಿನವಿಡೀ ದುಡಿದು ದಣಿದು ಬಂದರೂ ನಿದ್ದೆ ಮಾತ್ರ ಬರುತ್ತಿಲ್ಲ ಎನ್ನುತ್ತಾರೆ ಹಲವರು. ಹಾಗಿದ್ದರೆ ನೆನಪಿರಲಿ, ಹೀಗೆ ದೀರ್ಘಾವಧಿಗೆ ನಿದ್ದೆಯಿಲ್ಲದೆ ಬಳಲುವುದು ಕೂಡ ಹೃದಯಾಘಾತದ ಮತ್ತೊಂದು ಮುನ್ಸೂಚನೆಯಾಗಿರುತ್ತೆ.

ಎದೆಯಲ್ಲಿ ಅಪಾರ ಉರಿ
ಕೆಲವೊಮ್ಮೆ ಎದೆ ಭಾಗದಲ್ಲಿ ಅಪಾರ ನೋವು ಕಾಣಿಸಿಕೊಳ್ಳುತ್ತೆ. ಭಾರವಾಗಿರುವುದನ್ನು ಏನೋ ಎತ್ತಿರಬೇಕು ಅಂತಾ ಹಲವರು ಸುಮ್ಮನಾಗಿ ಬಿಡುತ್ತಾರೆ. ಹೀಗೆ ಪದೇ ಪದೆ ಎದೆ ಉರಿಯುವುದು ಕೂಡ ಹೃದಯಾಘಾತದ ಮುನ್ಸೂಚನೆಯಾಗಿರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ಅತಿಯಾಗಿ ಬೆವರುವುದು ಆಪತ್ತಾ?
ಇದ್ದಕ್ಕಿದ್ದಂತೆ ಕೆಲವರು ಬೆವರಲು ಆರಂಭಿಸಿಬಿಡುತ್ತಾರೆ. ಸಹಜವಾಗಿ ಬೆವರುವುದಕ್ಕಿಂತ ಹೆಚ್ಚು ಬೆವರುವುದು ಕೂಡಾ ಹೃದಯಾಘಾತದ ಸುಳಿವಾಗಿರುತ್ತೆ. ನಿರಂತರವಾಗಿ ಬೆವರುತ್ತಲೇ ಇರುವುದು ದೇಹದಲ್ಲಿ ಏನೋ ಹೆಚ್ಚು ಕಮ್ಮಿ ಆಗಿದೆ ಅನ್ನೋದರ ಸುಳಿವಾಗಿರುತ್ತೆ. ಹೀಗಾಗಿ ಇದನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ.
ದಿಢೀರ್ ಅಂತಾ ವಾಂತಿ ಕಾಣಿಸಿಕೊಳ್ಳುವುದು
ಕೆಲವರಿಗೆ ಪಿತ್ತ ಅನ್ನೋ ಕಾರಣಕ್ಕೆ ವಾಂತಿಯಾಯಾಗುತ್ತದೆ ಅಂತಾರೆ. ಎಲ್ಲಾ ಸಂದರ್ಭದಲ್ಲೂ ಅದೇ ಸರಿಯಾಗಿರುವುದಿಲ್ಲ. ಪಿತ್ತವನ್ನು ಮೀರಿ ಕೆಲಮೊಮ್ಮೆ ವಾಂತಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಸ್ವಯಂ ಮದ್ದು ಸ್ವೀಕರಿಸೋ ಬದಲು ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡಿಯಿರಿ. ಈ ಮೇಲಿನ ಯಾವ ಗುಣಗಳು ಯಾರೊಬ್ಬರಿಗೇ ಪದೇ ಪದೆ ಕಾಣಿಸಿಕೊಂಡರೆ, ಅಂಥವರು ನಿರ್ಲಕ್ಷ್ಯ ಮಾಡದೆ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಹೀಗಾಗಿಯೇ ವೈದ್ಯರು ಕೂಡ ಹೃದಯಾಘಾತದಿಂದ ಪಾರಾಗಲು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ ಅಂತಾ ಸಲಹೆ ನೀಡುತ್ತಿದ್ದಾರೆ.



















