ಮೈಸೂರು: ರಾಜ್ಯದಲ್ಲಿ ಡೆಂಗ್ಯೂ ಆತಂಕ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮೈಸೂರಿನಲ್ಲಿಯೂ ಅನೇಕ ಪ್ರಕರಣಗಳು ಪತ್ತೆಯಾಗಿವೆ. ಡೆಂಗ್ಯೂನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆರೋಗ್ಯಾಧಿಕಾರಿಯೇ ಅದಕ್ಕೆ ಬಲಿಯಾಗಿದ್ದಾರೆ.
ಸಮುದಾಯದ ಆರೋಗ್ಯಾಧಿಕಾರಿಯಾಗಿದ್ದ ನಾಗೇಂದ್ರ (32) ಎಂಬುವರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷದ ಮೊದಲ ಡೆಂಗ್ಯು ಬಲಿ ಇದು ಎನ್ನಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ ಅವರಲ್ಲಿ ಇತ್ತೀಚೆಗೆ ಜ್ವರ ಕಾಣಿಸಿಕೊಂಡಿತ್ತು.
ತೀವ್ರ ನಿತ್ರಾಣರಾಗಿದ್ದ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 2024ರಲ್ಲಿ ಇಲ್ಲಿಯವರೆಗೆ ನಡೆಸಿರುವ 3489 ಪರೀಕ್ಷೆಗಳ ಪೈಕಿ 479 ಡೆಂಗ್ಯು ಪ್ರಕರಣಗಳು ದೃಢವಾಗಿದೆ. ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿ 162 ಆ್ಯಕ್ಟೀವ್ ಪ್ರಕರಣಗಳು ದಾಖಲಾಗಿವೆ.

ರಾಜ್ಯರಾಜದಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2,194 ಕೇಸ್ ಗಳು ದಾಖಲಾಗಿವೆ. ಮಹದೇವಪುರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ 610 ಕೇಸ್ ಗಳು ದಾಖಲಾಗಿವೆ
ಜು. 2ರಂದು ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕಗ್ಗದಾಸನಪುರದ 27 ವರ್ಷದ ವ್ಯಕ್ತಿಯೊಬ್ಬರು ಡೆಂಗ್ಯೂವಿನಿಂದಾಗಿ ಮರಣ ಹೊಂದಿದ್ದಾರೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಡೆಂಗ್ಯೂವಿನಿಂದ ಸಾವನ್ನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
