ಬೆಂಗಳೂರು: ಸರ್ಕಾರವು ನಕಲಿ ವೈದ್ಯರ ವಿರುದ್ಧ ಎಷ್ಟೇ ಸಮರ ಸಾರಿದರೂ ಇದುವರೆಗೂ ಹಾವಳಿ ಮಾತ್ರ ನಿಂತಿಲ್ಲ. ಈಗ ಮತ್ತೊಮ್ಮೆ ನಕಲಿ ವೈದ್ಯರ ವಿರುದ್ಧ ಸರ್ಕಾರ ಸಮರ ಸಾರಿದೆ.
ಡಾಕ್ಟರ್ ಪದವಿ ಪಡೆಯದೆ ವೈದ್ಯಕೀಯ ವೃತ್ತಿ ನಡೆಸುತ್ತಿರುವ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ಸಾರ್ವಜನಿಕರು ಕೂಡ ನಕಲಿ ವೈದ್ಯರಿಂದಾಗಿ ಸಾಕಷ್ಟು ತೊಂದರೆಗಳನ್ನು ಕೂಡ ಅನುಭವಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಗೆ ನೂರಾರು ದೂರುಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಕಲಿ ವೈದ್ಯರ ಬೇಟೆಯಾಡುತ್ತಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ತಪಾಸಣೆ ಆರಂಭಿಸಿದ್ದು, ನೂರಾರು ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಕಳೆದ ಒಂದೇ ವರ್ಷದಲ್ಲಿ 958 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಈ ಪೈಕಿ ಬೀದರ್ ನಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ನೆರೆ ರಾಜ್ಯ ಮಹಾರಾಷ್ಟ್ರ ದಿಂದ ನಕಲಿ ವೈದ್ಯರು ಬಂದು ಚಿಕಿತ್ಸೆ ನೀಡುತ್ತಿರುವುದು ಆಘಾತಕಾರಿಯಾಗಿದೆ. ಬೀದರ್ ನಲ್ಲಿ ಒಂದೇ ವರ್ಷದಲ್ಲಿ 213 ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದೆ.
442 ನಕಲಿ ವೈದ್ಯರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಾನೂನಿನ ಅಡಿಯಲ್ಲಿ 67 ನಕಲಿ ವೈದ್ಯರ ವಿರುದ್ದ ಕೇಸ್ ದಾಖಲು ಮಾಡಲಾಗಿದೆ. 89 ಜನ ವೈದ್ಯರಿಗೆ ದಂಡ ವಿಧಿಸಲಾಗಿದೆ. ಕಾನೂನಿನ ಅಡಿಯಲ್ಲಿ ನಕಲಿ ವೈದ್ಯರಿಗೆ 1 ಲಕ್ಷ ರೂ. ವರೆಗೆ ದಂಡ ಹಾಗೂ 3 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಈಗ ಪತ್ತೆಯಾಗುತ್ತಿರುವ ನಕಲಿ ವೈದ್ಯರಿಗೆ ಇಲಾಖೆ ಕೇವಲ ದಂಡ ವಿಧಿಸುತ್ತಿದೆ. ಈ ಕುರಿತು ವೈದ್ಯಕೀಯ ಉಪ ನಿರ್ದೇಶಕ ಡಾ. ವಿವೇಕ್ ದೊರೈ ಮಾಹಿತಿ ನೀಡಿದ್ದಾರೆ.