ಕಲಬುರಗಿ: ಪತ್ನಿಯನ್ನು (Wife) ಮನೆಗೆ ಬಾ ಎಂದು ಕರೆದಿದ್ದಕ್ಕೆ ಬಾಮೈದನಿಂದ ಚಾಕು ಇರಿತಕ್ಕೊಳಗಾಗಿ ಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆನಂದ್ ಎಂದು ಗುರುತಿಸಲಾಗಿದೆ. ಆತ ಕಳೆದ ಎರಡು ವರ್ಷದ ಹಿಂದೆ ಗಾಜಿಪುರದ ಸ್ನೇಹಾ ಎಂಬ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ನಂತರ ಇಬ್ಬರ ಮಧ್ಯೆ ಹೊಂದಾಣಿಕೆ ಕೊರತೆಯಾಗಿದೆ. ಹೀಗಾಗಿ ಮಹಿಳೆ ತನ್ನ ತವರು ಸೇರಿದ್ದಾಳೆ.
ಆದರೆ, ಪತಿ ಆನಂದ್, ತನ್ನ ಅಣ್ಣನ ವಿವಾಹವಿರುವ ಹಿನ್ನೆಲೆಯಲ್ಲಿ ಮನೆಗೆ ಬರುವಂತೆ ಸ್ನೇಹಾಳನ್ನು ಕರೆದಿದ್ದ. ಇದೇ ವಿಚಾರಕ್ಕೆ ಸ್ನೇಹಾಳ ಸಹೋದರ ಟೋನಿ ಮತ್ತು ಆತನ ಸ್ನೇಹಿತರು ಸೇರಿ ಆನಂದ್ಗೆ ಚಾಕುವಿನಿಂದ ಇರಿದಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.