ನವದೆಹಲಿ : ಭಾರತೀಯ ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಸೀಮಿತ ಓವರ್‌ಗಳ ಮಾದರಿಯಲ್ಲಿ ಕಂಡುಕೊಂಡ ಆಕ್ರಮಣಕಾರಿ ಶೈಲಿಯ ಹಿಂದೆ ನಾಯಕ ರೋಹಿತ್ ಶರ್ಮಾ ಅವರ ತ್ಯಾಗ ಮತ್ತು ದಿಟ್ಟತನವಿದೆ ಎಂದು ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಣ್ಣಿಸಿದ್ದಾರೆ. ತಂಡದ ಆಟದ ಶೈಲಿಯನ್ನು ಬದಲಿಸುವಲ್ಲಿ ರೋಹಿತ್ ಶರ್ಮಾ ಅವರ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ದ್ರಾವಿಡ್, ಮೈದಾನದಲ್ಲಿ ನಾಯಕನಾದವನು ಹೇಗೆ ಮಾದರಿಯಾಗಬೇಕು ಮತ್ತು ತಂಡಕ್ಕಾಗಿ ತನ್ನ ವೈಯಕ್ತಿಕ ದಾಖಲೆಗಳನ್ನು ಹೇಗೆ ಬದಿಗಿಡಬೇಕು ಎಂಬುದಕ್ಕೆ ಹಿಟ್‌ಮ್ಯಾನ್ ಅವರನ್ನು ಉದಾಹರಣೆಯಾಗಿ ನೀಡಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಸೀಮಿತ ಓವರ್‌ಗಳ ಪಂದ್ಯಗಳ ಸ್ವರೂಪ ವೇಗವಾಗಿ ಬದಲಾಗುತ್ತಿದ್ದ ಸಮಯವದು. ಜಾಗತಿಕವಾಗಿ ರನ್ ರೇಟ್ ಗಗನಕ್ಕೇರುತ್ತಿತ್ತು ಮತ್ತು ಇತರೆ ತಂಡಗಳು ಹೆಚ್ಚು ರಿಸ್ಕ್ ತೆಗೆದುಕೊಂಡು ಆಡುತ್ತಿದ್ದವು. ಆ ಸಂದರ್ಭದಲ್ಲಿ ಭಾರತ ತಂಡ ಎಲ್ಲೋ ಒಂದು ಕಡೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಹಿಂದುಳಿದಿದೆ ಎಂಬ ಭಾವನೆ ಮ್ಯಾನೇಜ್‌ಮೆಂಟ್‌ಗೆ ಕಾಡುತ್ತಿತ್ತು. ಆಗ ತಂಡದ ಆಟದ ಶೈಲಿಯನ್ನು ಬದಲಿಸುವ ಮತ್ತು ಹೆಚ್ಚು ಆಕ್ರಮಣಕಾರಿಯಾಗಿ ಆಡುವ ಅನಿವಾರ್ಯತೆ ಎದುರಾಯಿತು. ಈ ಬದಲಾವಣೆಗೆ ಒಗ್ಗಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಆದರೆ ಆ ಸವಾಲನ್ನು ರೋಹಿತ್ ಶರ್ಮಾ ಸ್ವೀಕರಿಸಿದ ರೀತಿ ಮತ್ತು ಅದನ್ನು ಕಾರ್ಯಗತಗೊಳಿಸಿದ ಬಗೆ ಅದ್ಭುತವಾಗಿತ್ತು ಎಂದು ದ್ರಾವಿಡ್ ಸ್ಮರಿಸಿದ್ದಾರೆ.
ತಂಡದ ಇತರ ಆಟಗಾರರಿಗೆ ವೇಗವಾಗಿ ರನ್ ಗಳಿಸುವಂತೆ ಹೇಳುವುದು ಸುಲಭ, ಆದರೆ ಅದನ್ನು ಸ್ವತಃ ಮಾಡಿ ತೋರಿಸುವುದು ಕಷ್ಟ. ಆದರೆ ರೋಹಿತ್ ಶರ್ಮಾ ಆ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ತೆಗೆದುಕೊಂಡರು. ನನ್ನ ಬ್ಯಾಟಿಂಗ್ ಸರಾಸರಿ (Average) ಕಡಿಮೆಯಾದರೂ ಪರವಾಗಿಲ್ಲ, ನನ್ನ ವೈಯಕ್ತಿಕ ದಾಖಲೆಗಳಿಗೆ ಪೆಟ್ಟು ಬಿದ್ದರೂ ಚಿಂತೆಯಿಲ್ಲ, ನಾನು ಮಾತ್ರ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟ ಆಡುತ್ತೇನೆ ಎಂದು ರೋಹಿತ್ ನಿರ್ಧರಿಸಿದ್ದರು. ನಾಯಕನೇ ಮುಂದೆ ನಿಂತು ರಿಸ್ಕ್ ತೆಗೆದುಕೊಂಡಾಗ, ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಇತರ ಆಟಗಾರರಿಗೆ ಭಯವಿಲ್ಲದೆ ಆಡಲು ಒಂದು ಸ್ಪಷ್ಟ ಸಂದೇಶ ರವಾನೆಯಾಯಿತು. ಇದು ತಂಡದ ಮನಸ್ಥಿತಿಯನ್ನೇ ಬದಲಿಸಿತು ಎಂದು ದ್ರಾವಿಡ್ ವಿವರಿಸಿದ್ದಾರೆ.
ವ್ಯಕ್ತಿತ್ವದಲ್ಲಿ ಬದಲಾವಣೆ ಇಲ್ಲ
ನಾಯಕತ್ವದ ಹೊರೆ ಹೊತ್ತ ನಂತರವೂ ರೋಹಿತ್ ಅವರ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ ಎಂಬುದು ಅವರ ಮತ್ತೊಂದು ಹೆಗ್ಗಳಿಕೆ. ತಂಡದ ಸದಸ್ಯರಿಗೆ ಅವರು ಎಂದಿನಂತೆಯೇ ಸ್ನೇಹಿತನಾಗಿ ಉಳಿದರು ಮತ್ತು ಬದಲಾವಣೆಯ ಹಂತವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಇದು ನಾಯಕನೊಬ್ಬನಲ್ಲಿ ಇರಬೇಕಾದ ಅಪರೂಪದ ಮತ್ತು ಪ್ರಮುಖ ಗುಣವಾಗಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿ ಹಾಕಿಕೊಟ್ಟ ಈ ಬಲವಾದ ಬುನಾದಿಯ ಮೇಲೆಯೇ ಈಗಿನ ಟಿ20 ತಂಡವು ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಇತ್ತೀಚೆಗೆ ಭಾರತ ತಂಡವು ಸತತವಾಗಿ 220ಕ್ಕೂ ಹೆಚ್ಚು ರನ್ ಗಳಿಸುತ್ತಿರುವುದು ಈ ಬದಲಾವಣೆಗೆ ಸಾಕ್ಷಿಯಾಗಿದೆ. ಇದೇ ಆತ್ಮವಿಶ್ವಾಸದೊಂದಿಗೆ ಭಾರತವು ಫೆಬ್ರವರಿ 7 ರಂದು ಅಮೆರಿಕ (USA) ವಿರುದ್ಧದ ಪಂದ್ಯದೊಂದಿಗೆ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಇದನ್ನೂ ಓದಿ : ಸಾರಿಗೆ ಕಾರ್ಮಿಕರ ಮುಖಂಡ ಅನಂತ್ ಸುಬ್ಬರಾವ್ ನಿಧನ.. ನಾಳೆಯ ‘ಬೆಂಗಳೂರು ಚಲೋ’ ಮುಂದೂಡಿಕೆ!



















