ತಿರುವನಂತಪುರಂ: ಶಾಲೆಯಲ್ಲಿ ನಡೆದ ವಿಪರೀತ ರ‍್ಯಾಗಿಂಗ್ ಹಾಗೂ ಚರ್ಮದ ಬಣ್ಣದ ಕಾರಣಕ್ಕೆ ನಡೆದ ನಿಂದನೆಯಿಂದ ನೊಂದು ಕೇರಳದ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಇತ್ತೀಚೆಗೆ ನಡೆದಿದೆ. ಬಾಲಕ ಮಿಹಿರ್ ಅಹ್ಮದ್ ಇತ್ತೀಚೆಗೆ ತಾನು ವಾಸಿಸುವ ಅಪಾರ್ಟ್ ಮೆಂಟ್‌ನ 26ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾನೆ. ಆತನಿಗೆ ಶಾಲೆಯಲ್ಲಿ ಹಾಗೂ ಶಾಲಾ ಬಸ್ ನಲ್ಲಿ ನಡೆಯುತ್ತಿದ್ದ ಚಿತ್ರಹಿಂಸೆಯ ಕುರಿತ ಒಂದೊಂದೇ ಭಯಾನಕ ಮಾಹಿತಿಗಳು ಈಗ ಬಹಿರಂಗವಾಗುತ್ತಿದ್ದು, ಮಗನಿಗೆ ನ್ಯಾಯ ಕೊಡಿಸಿ ಎಂದು ಹೆತ್ತವರು ಅವಲತ್ತುಕೊಂಡಿದ್ದಾರೆ.
ಮಿಹಿರ್ ಎರ್ನಾಕುಳಂನ ಗ್ಲೋಬಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದ. ಜ.15ರಂದು ಮಧ್ಯಾಹ್ನ ಶಾಲೆಯಿಂದ ಬಂದವನೇ ಅಪಾರ್ಟ್ ಮೆಂಟ್ ನ 26ನೇ ಮಹಡಿಯಿಂದ ಜಿಗಿದು ಇಹಲೋಕಕ್ಕೆ ವಿದಾಯ ಹೇಳಿದ್ದ. ಆತನ ಈ ಕೃತ್ಯಕ್ಕೆ ಕಾರಣ ಹುಡುಕುತ್ತಾ ಅವನ ಸಹಪಾಠಿಗಳ ಬಳಿ ವಿಚಾರಿಸಿದಾಗ, ರ‍್ಯಾಗಿಂಗ್ ಗೆ ಸಂಬಂಧಿಸಿದ ಹಲವು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಇನ್ನೊಂದೆಡೆ ಮಿಹಿರ್ ತಾಯಿ ಮಕ್ಕಳ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಮಿಹಿರ್ ಅನುಭವಿಸಿದ ದೌರ್ಜನ್ಯ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.
“ನಾನು ನ್ಯಾಯಕ್ಕಾಗಿ ಎದುರುನೋಡುತ್ತಿರುವ ತಾಯಿ. ನನ್ನ ಮಗ ಬಹಳ ಸಂತೋಷವಾಗಿ, ಆಕ್ಟಿವ್ ಆಗಿದ್ದ. ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಆ ಕರಾಳ ದಿನದಂದು, ಮಧ್ಯಾಹ್ನ 2.45ಕ್ಕೆ ಮಿಹಿರ್ ಶಾಲೆಯಿಂದ ಮರಳಿದ್ದ. ಸಂಜೆ 3.50ರ ಸಮಯಕ್ಕೆ ನನ್ನ ಜಗತ್ತೇ ಇಲ್ಲವಾಯಿತು. ಅವನು ನಮ್ಮ ಚಾಯ್ಸ್ ಪ್ಯಾರಡೈಸ್ ಅಪಾರ್ಟ್ ಮೆಂಟ್ ನ 26ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದ. ಕೆಳಗೆ ಬೀಳುತ್ತಲೇ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು” ಎನ್ನುತ್ತಾ ಮಿಹಿರ್ ತಾಯಿ ರಜ್ನಾ ಕಣ್ಣೀರಿಟ್ಟಿದ್ದಾರೆ.

ಟಾಯ್ಲೆಟ್ ಸೀಟು ನೆಕ್ಕಿಸುತ್ತಿದ್ದರು:
ಮಗನ ಸಾವಿಗೆ ಕಾರಣ ಹುಡುಕಬೇಕೆಂದು ನಾವು ಹಲವು ಮಕ್ಕಳನ್ನು, ಸಹಪಾಠಿಗಳನ್ನು ಸಂಪರ್ಕಿಸಿದೆವು. ಆಗಲೇ ಮಗ ಅವನು ಅನುಭವಿಸಿದ್ದ ಚಿತ್ರಹಿಂಸೆ ಬಗ್ಗೆ ಗೊತ್ತಾಗಿದ್ದು. ಶಾಲೆಯಲ್ಲಿ ಮತ್ತು ಶಾಲಾ ಬಸ್ಸಿನಲ್ಲಿ ವಿದ್ಯಾರ್ಥಿಗಳ ಗ್ಯಾಂಗ್ ವೊಂದು ನನ್ನ ಮಗನಿಗೆ ಕ್ರೂರ ಹಿಂಸೆ ಕೊಡುತ್ತಿತ್ತು. ಅವನ ಚರ್ಮದ ಬಣ್ಣದ ಬಗ್ಗೆ ಹೇಳಿ ಹೀಯಾಳಿಸುತ್ತಿತ್ತು. ಆ ವಿದ್ಯಾರ್ಥಿಗಳು ನನ್ನ ಮಗನಿಗೆ ತಮ್ಮಿಷ್ಟಬಂದಂತೆ ಹೊಡೆಯುತ್ತಿದ್ದರು, ನಿಂದಿಸುತ್ತಿದ್ದರು. ಮಿಹಿರ್ ಸಾಯುವ ದಿನ ಶಾಲೆಯಲ್ಲಿ ಅವನನ್ನು ವಾಷ್‌ರೂಂಗೆ ಕರೆದೊಯ್ದು, ಟಾಯ್ಲೆಟ್ ಸೀಟನ್ನು ನೆಕ್ಕಿಸಿದ್ದರು. ಟಾಯ್ಲೆಟ್ ಫ್ಲಷ್ ಮಾಡಿ ಬರುವ ನೀರಿಗೆ ಅವನ ತಲೆಯನ್ನು ಒಡ್ಡಿದ್ದರು. ಇದು ಅವನ ಮನಸ್ಸನ್ನು ಎಷ್ಟರ ಮಟ್ಟಿಗೆ ಘಾಸಿಗೊಳಿಸಿತೆಂದರೆ ಅವನು ಈ ಕ್ರೂರ ಲೋಕಕ್ಕೇ ವಿದಾಯ ಹೇಳಿಬಿಟ್ಟ” ಎಂದು ತಾಯಿ ರಜ್ನಾ ಹೇಳಿದ್ದಾರೆ. ಜೊತೆಗೆ, ಮಿಹಿರ್ ಸಹಪಾಠಿಗಳ ಚಾಟ್‌ನ ಸ್ಕ್ರೀನ್ ಶಾಟ್ ಗಳನ್ನೂ ಅವರು ಹಂಚಿಕೊಂಡಿದ್ದಾರೆ.