ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಜಯ್ ಶಾ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅವರಿಗೆ ಕ್ರಿಕೆಟ್ ಬ್ಯಾಟ್ ಹಿಡಿಯಲೂ ಬರುವುದಿಲ್ಲ, ಆದರೂ ಅವರೇ ಇಡೀ ಕ್ರೀಡೆಯನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ಬಿಹಾರದ ಭಾಗಲ್ಪುರ್‌ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನೀವು ಅದಾನಿ, ಅಂಬಾನಿ ಅಥವಾ ಅಮಿತ್ ಶಾ ಅವರ ಮಗನಾಗಿದ್ದರೆ ಮಾತ್ರ ದೊಡ್ಡ ಕನಸು ಕಾಣಲು ಸಾಧ್ಯ. ಅಮಿತ್ ಶಾ ಅವರ ಮಗನಿಗೆ (ಜಯ್ ಶಾ) ಬ್ಯಾಟ್ ಹಿಡಿಯುವುದು ಹೇಗೆ ಎಂದೇ ಗೊತ್ತಿಲ್ಲ, ಇನ್ನುರನ್ ಗಳಿಸುವುದು ದೂರದ ಮಾತು. ಆದರೆ ಅವರೇ ಕ್ರಿಕೆಟ್‌ನ ಮುಖ್ಯಸ್ಥ. ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಅವರೇ ನಿಯಂತ್ರಿಸುತ್ತಾರೆ. ಏಕೆ? ಹಣದ ಕಾರಣಕ್ಕಾಗಿ,” ಎಂದು ಆರೋಪಿಸಿದರು.
ಡಿಸೆಂಬರ್ 2024ರಿಂದ ಜಯ್ ಶಾ ಅವರು ಕ್ರಿಕೆಟ್‌ನ ಜಾಗತಿಕ ಆಡಳಿತ ಮಂಡಳಿಯಾದ ಐಸಿಸಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು, ಅವರು 2021 ರಿಂದ 2024ರವರೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿದ್ದರು ಮತ್ತು 2019 ರಿಂದ 2021ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಇದೇ ವೇಳೆ ಎನ್‌ಡಿಎ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ರಾಹುಲ್ ಗಾಂಧಿ, “ಮೋದಿ ಸರ್ಕಾರವು ರೈತರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳನ್ನು ನಾಶಮಾಡಲು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತಂದಿದೆ. ಈ ಸರ್ಕಾರ ಬಡವರ ಭೂಮಿಯನ್ನು ಕಸಿದುಕೊಂಡು ಅಂಬಾನಿ ಮತ್ತು ಅದಾನಿಯಂತಹ ಉದ್ಯಮಿಗಳಿಗೆ ಉಡುಗೊರೆಯಾಗಿ ನೀಡುತ್ತಿದೆ,” ಎಂದು ಆರೋಪಿಸಿದರು.
ಬಿಹಾರದ 243 ವಿಧಾನಸಭಾ ಸ್ಥಾನಗಳ ಪೈಕಿ 122 ಸ್ಥಾನಗಳಿಗೆ ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಪಾಕ್ ಅಣು ಸ್ಥಾವರದ ಮೇಲಿನ ದಾಳಿಗೆ ಇಂದಿರಾ ಗಾಂಧಿ ಅನುಮೋದನೆ ನೀಡಿರಲಿಲ್ಲ: ಮಾಜಿ ಸಿಐಎ ಅಧಿಕಾರಿ



















