ಶಸ್ತ್ರ ಚಿಕಿತ್ಸೆಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೊರಡಲು ಸಿದ್ಧವಾಗಿರುವ ಶಿವರಾಜ್ ಕುಮಾರ್ ಮತ್ತೊಂದು ಹೊಸ ಸಿನಿಮಾ ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಭೈರತಿ ರಣಗಲ್ ಯಶಸ್ಸಿನ ಬೆನ್ನಲ್ಲೇ ಶಿವಣ್ಣ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಗೂಗ್ಲಿ’ ನಿರ್ದೇಶಕ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ.
ನಿರ್ದೇಶನದ ಜೊತೆಗೆ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಪವನ್, ತಮ್ಮದೇ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. 2025ಕ್ಕೆ ಶಿವಣ್ಣ ಹಾಗೂ ಪವನ್ ಜೋಡಿಯ ಹೊಸ ಚಿತ್ರ ಟೇಕಾಫ್ ಆಗಲಿದೆ. ‘ಪ್ರತಿಯೊಬ್ಬ ನಿರ್ದೇಶಕರಿಗೂ ಶಿವಣ್ಣನಿಗೆ ಚಿತ್ರ ಮಾಡಬೇಕೆಂಬ ಕನಸು ಇರುತ್ತದೆ. ನನ್ನ ಈ ಕನಸು ಈಗ ನನಸಾಗುತ್ತದೆ. ಥ್ರಿಲ್ಲರ್ ಜೊತೆಗೆ ಸಂಪೂರ್ಣ ಕಮರ್ಷಿಯಲ್ ಚಿತ್ರ. ಮಾಸ್ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಹಿಂದಿನ ಸಿನಿಮಾಗಳಿಗಿಂತ ಭಿನ್ನ ಗೆಟಪ್’ ಎಂದಿದ್ದಾರೆ ಪವನ್.
ಒಡೆಯರ್ ಮೂವೀಸ್ ಬ್ಯಾನರ್ ನಡಿ ಅಪೇಕ್ಷಾ ಪವನ್ ಒಡೆಯರ್ ಹಾಗೂ ಪವನ್ ಒಡೆಯರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ನಾ ಕ್ರಿಯೇಟಿವ್ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ.