ಹಾಸನ : ಹಾಸನದ ಮೊಸಳೆಹೊಸಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದಾರೆ. ಆರು ಯುವಕರು ಸ್ಥಳದಲ್ಲಿಯೇ ಅಸುನೀಗಿದರೆ, ಇನ್ನು ಮೂವರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಯಮನ ರೂಪದಲ್ಲಿ ಬಂದ ಟ್ರಕ್‌ನಿಂದಾಗಿ ಅಮಾಯಕ ಜೀವಗಳು ಪ್ರಾಣ ಕಳೆದುಕೊಳ್ಳಬೇಕಾಯಿತು. ಟ್ರಕ್ ಚಾಲಕ ಮುಸ್ಲಿಂ ಎಂಬ ರೀತಿಯಲ್ಲಿ ಬಿಂಬಿಸುತ್ತ ವಿಪಕ್ಷಗಳ ಕೆಲವರು ಈ ಘಟನೆಗೆ ಕೋಮು ಬಣ್ಣ ನೀಡುತ್ತಿರುವುದೂ ಕಂಡುಬಂದಿದೆ. ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಇಂತಹ ದುರ್ವರ್ತನೆಯೂ ಕಾನೂನು ರೀತಿಯ ಅಪರಾಧವಾಗಿದ್ದು, ಅಂಥವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.