ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳಾ ಕುಸ್ತಿಯ 50 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಿಗದಿಗಿಂತ ಹೆಚ್ಚಿನ ತೂಕ ಹೊಂದಿದಕ್ಕಾಗಿ ಫೈನಲ್ ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಸಾಕಷ್ಟು ಹೋರಾಟಗಳ ಮಧ್ಯೆಯೂ ವಿಫಲವಾಗಿದ್ದರು. ಇದಕ್ಕೆ ಇಡೀ ಭಾರತವೇ ಮಮ್ಮಲ ಮರುಗಿತ್ತು. ಹಲವರು ಹಲವಾರು ರೀತಿಯಲ್ಲಿ ಈಗ ವ್ಯಾಖ್ಯಾನಿಸುತ್ತಿದ್ದಾರೆ.
ಬಿಜೆಪಿಯ ಸಾಮಾಜಿಕ ಜಾಲತಾಣದ ಖಾತೆಯೊಂದು ಈಗ ಇದರಲ್ಲಿ ರಾಜಕೀಯ ಬೆರತಿರುವ ಶಂಕೆ ವ್ಯಕ್ತಪಡಿಸಿದೆ. ಪದಕ ಸಿಗದಂತೆ ತಡೆದ ರಾಜಕೀಯ ಶಕ್ತಿ ಇರುವುದೇ ನಿಜವೆಂದಾದರೆ, ಒಲಿಂಪಿಕ್ಸ್ ಗೆ ಕಳುಹಿಸದೇ ಇರುವ ಶಕ್ತಿಯೂ ಅದೇ ರಾಜಕೀಯ ಶಕ್ತಿಗೆ ಇರುತ್ತಿತ್ತಲ್ಲವೆ? ಎಂದು ಖಾತೆಯಲ್ಲಿ ಪ್ರಶ್ನಿಸಲಾಗಿದೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ವಿನೇಶ್ ಫೋಗಟ್ ಆಡದಂತೆ ಯಾರಾದರೂ ತಡೆದರಾ? ಎಂಬ ಊಹಾಪೋಹದತ್ತ ದೃಷ್ಟಿ ನೆಟ್ಟು ನೆಟ್ಟಿಗರನ್ನು ಪೋಸ್ಟ್ ಮೂಲಕ ಕೆಣಕಲಾಗಿದೆ. ಆಕೆಗೆ ಪದಕ ಸಿಗದಂತೆ ತಡೆದದ್ದೇ ಹೌದಾದರೇ, ಅವರಿಗೆ ಆಕೆಯನ್ನು ಒಲಂಪಿಕ್ಕಿಗೆ ಹೋಗದಂತೆ (ಆಯ್ಕೆ ಆಗದಂತೆ) ತಡೆಯುವ ಶಕ್ತಿಯೂ ಇರುತ್ತಿತ್ತು ಎಂಬುವುದುದು ಬಿಜೆಪಿಯ ವಾದವಾಗಿದೆ.
ಈ ನಡುವೆ ಪದಕ ಕೈತಪ್ಪಿದ ಹತಾಶೆಯಲ್ಲಿದ್ದ ವಿನೇಶ್ ಕುಸ್ತಿಗೆ ವಿದಾಯವನ್ನು ಘೋಷಿಸಿದ್ದರು. ಈ ಮಧ್ಯೆ ಈಗ ಒಲಿಂಪಿಕ್ಸ್ ನಿಂದ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ವಿನೇಶ್ಗೆ ಬೆಳ್ಳಿ ಪದಕ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಂಡ ಬಳಿಕ ವಿನೇಶ್ ಫೋಗಟ್ ಅವರು ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದರೂ ನೀಡಬೇಕು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CSA) ಮನವಿ ಮಾಡಿದ್ದರು. CSA ವಿನೇಶ್ ಅವರ ಮನವಿಯನ್ನು ಸ್ವೀಕರಿಸಿದ್ದು ವಿಚಾರಣೆ ನಡೆಸಲು ಮುಂದಾಗಿದೆ. ಈ ಪ್ರಕರಣದ ಕುರಿತು ಅಂತಿಮ ನಿರ್ಧಾರ ಇನ್ನಷ್ಟೇ ಬರಬೇಕಿದೆ. ಹೀಗಾಗಿ ವಿನೇಶ್ ತಮ್ಮ ಚೊಚ್ಚಲ ಒಲಿಂಪಿಕ್ ಪದಕ ಪಡೆಯುವ ಭರವಸೆಯಲ್ಲಿದ್ದಾರೆ.