ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಒಂದು ಶತಮಾನವೇ ಉರುಳಿ ಹೋಗಿದೆ. ಹೌದು…ಒಂದಿಡೀ ಶತಮಾನದ ಬಳಿಕವೀಗ ಕೇಂದ್ರದ ಮೋದಿ ಸರ್ಕಾರ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದೆ. ಈ ಮೂಲಕ ದೇಶದಲ್ಲಿನ ಆರ್ಥಿಕ, ಶೈಕ್ಷಣಿಕ, ರಾಜಕೀಯ, ಮತ್ತು ಸಾಮಾಜಿಕ ಅಸಮತೋಲನವನ್ನು ಸರಿದೂಗಿಸುವ ಕಾರ್ಯಕ್ಕೆ ಮುನ್ನುಡಿ ಬರೆದಂತಾಗಿದೆ. ಮೋದಿ ಸರ್ಕಾರ ದೇಶದಲ್ಲಿ ಜನಗಣತಿ ಜೊತೆ ಈ ಬಾರಿ ಜಾತಿಗಣತಿಗೂ ಗ್ರೀನ್ ಸಿಗ್ನಲ್ ನೀಡಿದೆ.
ಆಂಗ್ಲರ ಆಳ್ವಿಕೆಯಲ್ಲೇ ಅಂತ್ಯ, ಸ್ವತಂತ್ರ ಭಾರತದಲ್ಲಿ ಮೊದಲು
ದಾಷ್ಟ್ಯದ ಬದುಕು, ಸಂಕೋಲೆಗಳ ಜೀವನ. ಮೂರು ಶತಮಾನಕ್ಕೂ ಹೆಚ್ಚು ಕಾಲ ಅಂಗ್ಲರ ದಬ್ಬಾಳಿಕೆಯಲ್ಲಿ ಬದುಕನ್ನು ಕಟ್ಟಿಕೊಂಡದ್ದು ಭಾರತ. ಇಂತಹ ದೇಶವನ್ನು ಮುನ್ನಡೆಸುವ ಉಮೇದಿಗೆ ಬಿದ್ದವರು ಸುಗಮ ಆಡಳಿತಕ್ಕಾಗಿ ಪ್ರತಿ 10 ವರ್ಷಕ್ಕೊಮ್ಮೆ ಜಾತಿ ಗಣತಿ ನಡೆಸುತ್ತಿದ್ದರು. 1881ರಿಂದ 1931ರ ವರೆಗೂ ಭಾರತ ಜಾತಿಗಣತಿಗೆ ಸಾಕ್ಷಿಯಾಗಿದೆ.
ಜಾತಿ ಸಮೀಕರಣದೊಟ್ಟಿಗೆ ದೇಶದಲ್ಲಿನ ಸಂಕೀರ್ಣ ಸಾಮಾಜಿಕ ರಚನೆಯನ್ನು ಅರ್ಥ ಮಾಡಿಕೊಳ್ಳಲು ಈ ಗಣತಿ ಆಂಗ್ಲರಿಗೆ ಅನುವಾಗುತ್ತಿತ್ತು. ಇಂತಹ ಗಣತಿಗೀಗ ಮತ್ತೆ ಕಾಲ ಕೂಡಿ ಬಂದಿದೆ. ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಕೆಲ ಮಾರ್ಪಾಡುಗಳನ್ನು ಮಾಡಿ 1951ರಲ್ಲಿ ಎಸ್ಸಿ ಮತ್ತು ಎಸ್ಟಿ ಮಾತ್ರ ಗಣತಿ ಮಾಡಲಾಯಿತು.
ಬಳಿಕ 1961ರಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಒಬಿಸಿಗಳ ರಾಜ್ಯವಾರು ಪಟ್ಟಿ ತಯಾರಿಗೆ ಅವಕಾಶ ಕಲ್ಪಿಸಿತು. 1980ರಲ್ಲಿ ಮಂಡಲ್ ಆಯೋಗವೂ ಒಬಿಸಿಗೆ ಶೇ. 27ರಷ್ಟು ಮೀಸಲಾತಿ ನೀಡಬೇಕು ಅಂತಾ ಶಿಫಾರಸು ಮಾಡಿತ್ತು. ಆಗಿನಿಂದಲೇ ದೇಶದಲ್ಲಿ ಮತ್ತೊಮ್ಮೆ ಜಾತಿಗಣತಿಗೆ ಆಗ್ರಹ ಕೇಳಿ ಬರುತ್ತಲೇ ಇತ್ತು. ಹಾಗಾಗಿಯೇ 2011ರಲ್ಲಿ ಅಂದಿನ ಯುಪಿಎ ಸರ್ಕಾರ ಜಾತಿಗಣತಿ ನಡೆಸಿತಾದ್ರೂ ಇಂದಿಗೂ ಅದರ ವರದಿ ಪರಿಪೂರ್ಣವಾಗಿ ಬಹಿರಂಗವಾಗಿಲ್ಲ.
ಜಾತಿ ಗಣತಿಗೆ ನಿಗದಿಯಾಗದ ಮುಹೂರ್ತ
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಈಗಾಗಲೇ ಜಾತಿ ಗಣತಿ ಬೆಂಕಿ ಹೊತ್ತಿ ಉರಿಯುತ್ತಿದೆ. ಸಿದ್ದು ಸರ್ಕಾರ ವೈಜ್ಞಾನಿಕವಾಗಿ ಜಾತಿ ಗಣತಿ ನಡೆಸಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇವೆ. ಲಿಂಗಾಯತ ಮತ್ತು ಒಕ್ಕಲಿಗರು ಗಣತಿ ವರದಿ ಬಹಿರಂಗಕ್ಕೆ ಅಡ್ಡಗಾಲಾಗಿದ್ದಾರೆ. ಇದರ ನಡುವೆ ಮೋದಿಯವರ ಈ ಜಾತಿ ಗಣತಿ ಅಸ್ತ್ರ ಮಾಸ್ಟರ್ ಸ್ಟ್ರೋಕ್ ಎನ್ನಿಸಿಕೊಳ್ಳುತ್ತಿದೆ. ಆದರೆ, ಈ ಗಣತಿ ರೂಪರೇಷ ಇನ್ನಷ್ಟೇ ಸಿದ್ಧವಾಗಬೇಕಿದೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರೋಗ್ಯ ಕ್ಷೇತ್ರದಲ್ಲಿನ ಅಸಮಾನತೆಯನ್ನು ತೊಲಗಿಸಿ ಹೊಸ ಬೆಳಕನ್ನು ನೀಡಬೇಕಿದೆ. ಹಾಗಂತಾ ಈ ಕಾರ್ಯಕ್ಕಿನ್ನೂ ಮುಹೂರ್ತವೂ ನಿಗದಿಯಾಗಿಲ್ಲ. ಆದ್ರೆ ಶತಮಾನಗಳ ಬಳಿಕದ ಜಾತಿ ಗಣತಿಯ ತೀರ್ಮಾನ ದೇಶದ ರಾಜಕೀಯದ ಮೇಲೆ ಭವಿಷ್ಯದಲ್ಲಿ ಅದೆಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಅನ್ನೋದು ಈಗಿರುವ ಪ್ರಶ್ನೆ.