ಆಸ್ಟ್ರೇಲಿಯಾ ವಿರುದ್ಧ ಮಾರ್ಚ್ 4ರಂದು ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಉಪವಾಸ ಕೈ ಬಿಟ್ಟು ಎನರ್ಜಿ ಡ್ರಿಂಕ್ ಕುಡಿದ ಮೊಹಮ್ಮದ್ ಶಮಿ ವಿರುದ್ಧ ಕೇಳಿ ಬಂದಿರುವ ಟೀಕೆಗಳಿಗೆ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ರಂಜಾನ್ ಉಪವಾಸವನ್ನು ಅನುಸರಿಸದಕ್ಕಾಗಿ ಶಮಿ ಮೇಲೆ ಮುಸ್ಲಿಂ ಧರ್ಮಗುರುಗಳು ಟೀಕೆ ಮಾಡಿದ್ದರು, ಅವರಿಗೆ “ಅಪರಾಧಿ ಮತ್ತು ಪಾಪಿ” ಎಂದು ಹಣೆಪಟ್ಟಿ ಒಡ್ಡಿದರು. ಇದನ್ನು ಭಜಿ ಗಂಭೀರವಾಗಿ ಆಕ್ಷೇಪಿಸಿದ್ದಾರೆ.
‘ಇಂಡಿಯಾ ಟುಡೇ’ ಜೊತೆ ಮಾತನಾಡಿದ ಹರ್ಭಜನ್ ಸಿಂಗ್, ಪ್ರತಿಯೊಬ್ಬ ವ್ಯಕ್ತಿಯು ತನ್ನ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವ ಸ್ವಾತಂತ್ರ್ಯ ಹೊಂದಿದ್ದಾನೆ. ಆದರೆ ಅವರ ನಂಬಿಕೆಗಳನ್ನು ಇತರರ ಮೇಲೆ ಹೇರಲು ಸಾಧ್ಯವಿಲ್ಲ ಎಂದರು.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ತೀವ್ರ ತಾಪಮಾನ ಮತ್ತು ಆರ್ದ್ರತೆ ನಡುವೆ ನಡೆದ ಪಂದ್ಯದಲ್ಲಿ ಶಮಿ ಒಟ್ಟು 10 ಓವರು ಬೌಲಿಂಗ್ ಮಾಡಿ 3 ವಿಕೆಟ್ ಪಡೆದು ಕೇವಲ 48 ರನ್ ನೀಡಿದ್ದರು. ಈ ಸಮಯದಲ್ಲಿ ಶಮಿ ಎನರ್ಜಿ ಡ್ರಿಂಕ್ ಸೇವಿಸುತ್ತಿರುವುದು ಕಂಡುಬಂದಿತ್ತು, ಇದರಿಂದಾಗಿ ಅವರ ದೇಹದ ಆರೋಗ್ಯ ಮತ್ತು ಸಾಮರ್ಥ್ಯ ಕಾಪಾಡಿಕೊಳ್ಳಲು ಸಹಾಯವಾಯಿತು ಎಂದು ಹರ್ಭಜನ್ ಹೇಳಿದ್ದಾರೆ.
“ನಾನು ಹೇಳಿರುವುದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು ಹೇಳಿದ್ದು ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು. ಕ್ರಿಕೆಟ್ ಮತ್ತು ಧರ್ಮವನ್ನು ಬೇರೆಬೇರೆ ಇರಿಸಬೇಕು. ಕೆಲವು ಮಂದಿ ಧರ್ಮವು ಈ ರೀತಿ ಪಾತ್ರವಹಿಸುತ್ತಿದೆ, ಆ ರೀತಿ ಪಾತ್ರವಹಿಸುತ್ತಿದೆ ಎಂದು ಭಾವಿಸುವುದು ಸಹಜ. ಆದರೆ ಶಮಿ ಈ ರೀತಿ ಮಾಡಬೇಕು, ರೋಹಿತ್ ಶರ್ಮಾ ಹಾಗೆ ಮಾಡಬೇಕು, ಅಥವಾ ಬೇರೆ ಯಾರಾದರೂ ಈ ನಿರ್ದಿಷ್ಟ ಕಾಲಘಟ್ಟದಲ್ಲಿ ಈ ಹಂತಗಳಲ್ಲಿ ಇದನ್ನು ಅನುಸರಿಸಬೇಕು ಎನ್ನುವುದು ನ್ಯಾಯೋಚಿತವಲ್ಲ” ಎಂದು ಹರ್ಭಜನ್ ಹೇಳಿದರು.
“ನೀವು ಮನೆಯಲ್ಲಿರುವಾಗ ಅಥವಾ ನಿಮ್ಮ ದಿನಚರಿಯನ್ನು ಅನುಸರಿಸುವಾಗ ಉಪವಾಸವಿರಬಹುದು. ಆದರೆ ಒಬ್ಬ ಕ್ರೀಡಾಪಟು ಆಟ ಆಡುತ್ತಿರುವಾಗ, ಅವನ ದೇಹಕ್ಕೆ ಶಕ್ತಿ ಬೇಕು, ಹೈಡ್ರೇಟೆಡ್ ಆಗಿರಬೇಕು. ಇಲ್ಲದಿದ್ದರೆ, ಅವನ ದೇಹ ಕುಸಿಯಬಹುದು,” ಎಂದು ಅವರು ಹೇಳಿದರು.
“ಅವರು ತೀವ್ರ ತಾಪಮಾನದಲ್ಲಿಯೇ ಆಟವಾಡುತ್ತಿದ್ದಾರೆ. ನೀರು ಕುಡಿಯದೇ ಅಥವಾ ಉಪಾಹಾರ ಸೇವಿಸದೇ ಆಟವಾಡುವುದು ಕಷ್ಟ. ದೇಹವೂ ಒಂದು ಯಂತ್ರದಂತೆ. ಅದಕ್ಕೆ ಶಕ್ತಿಗಾಗಿ ಇಂಧನ ಬೇಕು” ಎಂದು ಹರ್ಭಜನ್ ಹೇಳಿದರು.
ಶಮಿ ಈ ಟೀಕೆಗಳಿಗೆ ಕ್ಯಾರೇ ಮಾಡುವುದಿಲ್ಲ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಗಾಯದಿಂದ ದೂರವಿದ್ದ ಶಮಿ, ಚಾಂಪಿಯನ್ಸ್ ಟ್ರೋಫಿಯ ಮುಂಚಿನ ಪಂದ್ಯಗಳಲ್ಲಿ ಗಾಯದ ಸಂಕಟ ಎದುರಿಸಿಕೊಂಡಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರ ಕಾಲಿನ ನೋವು ಹೆಚ್ಚಾದರೂ, ಅದನ್ನು ಗೆದ್ದುಕೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ. ಹರ್ಭಜನ್ ಅವರು ಉಪವಾಸ ಕುರಿತ ಟೀಕೆಗಳು ಶಮಿ ಅವರ ಆಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾರ್ಚ್ 9 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಗೆದ್ದು ತಮ್ಮ ಸತತ ಎರಡನೇ ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಹಂಬಲಿಸುತ್ತಿದೆ. ಈ ಟೂರ್ನಮೆಂಟ್ನಲ್ಲಿ ಶಮಿ ಭಾರತದ ಪ್ರಮುಖ ಬೌಲರ್ ಆಗಿದ್ದು, ನಾಲ್ಕು ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.