ಬಾಗಲಕೋಟೆ: ಜಮಖಂಡಿ ನಗರದಲ್ಲಿ ಮೀಟರ್ ಬಡ್ಡಿ ದಂಧೆ ಮಿತಿ ಮೀರಿದ್ದು, ಮೀಟರ್ ಬಡ್ಡಿ ಕುಳಗಳಿಗೆ ವ್ಯಕ್ತಿ ಹೈರಾಣಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಾಹಿಲ್ ಸನದಿ ಸಾಲ ಕೊಟ್ಟು ಕಿರುಕುಳ ನೀಡಿದ ವ್ಯಕ್ತಿ ಎನ್ನಲಾಗಿದೆ. ಮದ್ಯವರ್ತಿಯಾಗಿ 2.5 ಲಕ್ಷ ರೂ. ಹಣವನ್ನು ಯಾಸ್ಮಿನ್ ಕರಡಿಗುಡ್ಡ ಎಂಬ ಮಹಿಳೆ ಅಸಲಿಗಿಂತ ಹೆಚ್ಚಾಗಿ ಬಡ್ಡಿ ಹಣ ಕೊಡಿ ಎಂದು ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.
ಇವರ ಬಡ್ಡಿ ದಾಹಕ್ಕೆ ನೊಂದ ವ್ಯಕ್ತಿ ಮನೆಯಲ್ಲಿದ್ದ ಬೈಕ್, ಪ್ರೀಜ್,ಟಿವಿ ಸೇರಿದಂತೆ ಮನೆಯಲ್ಲಿಟ್ಟಿದ್ದ ಎಲ್ಲ ವಸ್ತುಗಳನ್ನು ಮಾರಿ ಬಡ್ಡಿ ಕಟ್ಟಿದ್ದಾರೆ. ಆದರೂ ಜಮಖಂಡಿ ನಗರದ ವಜೀರ್ ಗೊಲಂದಾಜ್ ಗೆ ಬಡ್ಡಿ ನೀಡಿದವರು ಪ್ರತಿ ದಿನ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಬಡ್ಡಿ ದಾಹಕ್ಕೆ ನೊಂದಿರುವ ವಜೀರ್, ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಮುಂದೆ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ, ಪೊಲೀಸರ ಮೊರೆ ಹೋಗಿದ್ದಾರೆ. ಈಗಾಗಲೇ ವಜೀರ್, 2.5 ಲಕ್ಷ ರೂ.ಗೆ 16 ತಿಂಗಳಿಗೆ 6.5 ಲಕ್ಷ ರೂ. ಬಡ್ಡಿ ತುಂಬಿದ್ದೇನೆ. ಈ ಮಧ್ಯೆ ವಾರದ ಬಡ್ಡಿ ಕಟ್ಟಿದ್ದೇನೆ. ನಂತರ ತಿಂಗಳಿಗೆ 27 ಸಾವಿರ ಬಡ್ಡಿ ಕಟ್ಟಬೇಕು ಎಂದು ದಂಧೆಕೋರರು ಪೀಡಿಸಿದ್ದಾರೆ. ಮಹಿಳೆ ಹಾಗೂ ಸಾಹಿಲ್ ಹಸನ್ ಸನದಿ ಕಿರಿಕಿರಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಠಾಣೆಗೆ ದೂರು ನೀಡಲು ಬಂದಾಗ ಸಾಹಿಲ್ ಸನಗದಿಯ ಆಪ್ತರು ಹಲ್ಲೆ ಮಾಡಲು ಕೂಡ ಯತ್ನಿಸಿದ್ದಾರೆ ಎನ್ನಲಾಗಿದೆ. ಹಸನ್ ಸನದಿ ರಾಜಾರೋಷವಾಗಿ ಬಡ್ಡಿದಂಧೆ ಮಾಡುತ್ತಿದ್ದಾನೆಂದು ಸಾರ್ವಜನಿಕರು ಆರೋಪಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.