ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನ ಕೇವಲ ಬ್ಯಾಟ್-ಬಾಲ್‌ನದ್ದಾಗಿರಲಿಲ್ಲ, ಅದು ಮತ್ತೊಮ್ಮೆ ನಾಯಕರ ವರ್ತನೆಯಿಂದ ಜಾಗತಿಕ ಗಮನ ಸೆಳೆದಿದೆ. ಏಷ್ಯಾ ಕಪ್ 2025ರ ಸೂಪರ್-4 ಹಂತದ ಪಂದ್ಯದಲ್ಲಿ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ ಅವರು ಟಾಸ್ ವೇಳೆ ಹಸ್ತಲಾಘವ (ಶೇಕ್‌ಹ್ಯಾಂಡ್) ನೀಡಲು ಮತ್ತೊಮ್ಮೆ ನಿರಾಕರಿಸಿದರು. ಈ ಮೂಲಕ ಲೀಗ್ ಹಂತದಲ್ಲಿ ಆರಂಭವಾದ ‘ಹ್ಯಾಂಡ್‌ಶೇಕ್ ವಿವಾದ’ ಮತ್ತಷ್ಟು ತೀವ್ರಗೊಂಡಿದೆ
ಲೀಗ್ ಪಂದ್ಯದ ಘಟನೆಯ ಪುನರಾವರ್ತನೆ
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ, ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡುವ ಬಗ್ಗೆ ಯಾವುದೇ ಆಸಕ್ತಿ ತೋರಲಿಲ್ಲ. ಸೆಪ್ಟೆಂಬರ್ 14ರಂದು ನಡೆದ ಲೀಗ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಹಸ್ತಲಾಘವ ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಅದೇ ಘಟನೆ ಸೂಪರ್-4 ಪಂದ್ಯದಲ್ಲೂ ಪುನರಾವರ್ತನೆಯಾಗಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಕ್ರಿಕೆಟ್ ಮೈದಾನಕ್ಕೂ ವ್ಯಾಪಿಸಿದೆ ಎಂಬುದನ್ನು ಸ್ಪಷ್ಟಪಡಿಸಿತು.
ವಿವಾದದ ಹಿನ್ನೆಲೆ ಮತ್ತು ಪಿಸಿಬಿ ದೂರು
ಲೀಗ್ ಪಂದ್ಯದಲ್ಲಿ ನಡೆದ ‘ಹ್ಯಾಂಡ್‌ಶೇಕ್ ನಿರಾಕರಣೆ’ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB), ಏಷ್ಯಾ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಮೂಲಕ ಐಸಿಸಿಗೆ ದೂರು ನೀಡಿತ್ತು. ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಕೈಬಿಡಬೇಕೆಂದು ಒತ್ತಾಯಿಸಿತ್ತು. ಆದರೆ, “PCB ತಪ್ಪು ಮಾಹಿತಿ ನೀಡುತ್ತಿದೆ,” ಎಂದು ಹೇಳಿ ಐಸಿಸಿ ಈ ದೂರನ್ನು ತಿರಸ್ಕರಿಸಿತ್ತು. ನಂತರ, ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿ ಪಾಕಿಸ್ತಾನ ‘ಹೈಡ್ರಾಮಾ’ ಮಾಡಿತ್ತು. ಆದರೆ, ಐಸಿಸಿ ಜೊತೆಗಿನ ಚರ್ಚೆಯ ನಂತರ ಒಂದು ಗಂಟೆ ತಡವಾಗಿ ಪಂದ್ಯವನ್ನು ಆಡಿತ್ತು.
ಪಂದ್ಯದಲ್ಲಿ ಯಯವ ಆಟಗಾರ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಲೀಗ್ ಹಂತದ ಗೆಲುವಿನ ಓಟವನ್ನು ಮುಂದುವರಿಸಿದೆ.
ಪಾಕಿಸ್ತಾನ ನೀಡಿದ 172 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಕೇವಲ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 74 ರನ್ ಸಿಡಿಸಿದ ಅಭಿಷೇಕ್ ಶರ್ಮಾ, ಪಾಕ್ ಬೌಲರ್‌ಗಳನ್ನು ಧೂಳೀಪಟ ಮಾಡಿದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಅವರಿಗೆ ಉತ್ತಮ ಸಾಥ್ ನೀಡಿದ ಶುಭಮನ್ ಗಿಲ್ 47 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ನಂತರ ಬಂದ ತಿಲಕ್ ವರ್ಮಾ, ಶಾಹೀನ್ ಅಫ್ರಿದಿ ಅವರ ಫುಲ್ ಟಾಸ್ ಎಸೆತವನ್ನು ಬೌಂಡರಿಗಟ್ಟಿ, ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು.