ಗಾಜಾಪಟ್ಟಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶಸ್ತ್ರ ತ್ಯಜಿಸುವಂತೆ ಎಚ್ಚರಿಕೆ ನೀಡಿರುವ ಮಧ್ಯೆಯೇ ಪ್ಯಾಲೆಸ್ತೀನ್‌ನ ಗಾಜಾದಲ್ಲಿ ಹಮಾಸ್ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಹತಾಶ ಪ್ರಯತ್ನ ನಡೆಸುತ್ತಿದೆ. ಇಸ್ರೇಲಿ ಪಡೆಗಳು (ಐಡಿಎಫ್) ಹಿಂದೆ ಸರಿದ ನಂತರ, ಗಾಜಾದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಇತರ ಸಶಸ್ತ್ರ ಗುಂಪುಗಳನ್ನು ಗುರಿಯಾಗಿಸಿ, 8 ಮಂದಿಯನ್ನು ಸಾರ್ವಜನಿಕವಾಗಿ ಬರ್ಬರವಾಗಿ ಹತ್ಯೆಗೈದಿದೆ.
ಸೋಮವಾರ ಸಂಜೆ ನಡೆದಿದೆ ಎನ್ನಲಾದ ಈ ಬೀದಿ ಹತ್ಯಾಕಾಂಡದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಲ್ಲಿ ತೀವ್ರವಾಗಿ ಥಳಿಸಲ್ಪಟ್ಟ ಎಂಟು ಮಂದಿಯನ್ನು ಬೀದಿಯಲ್ಲಿ ಮಂಡಿಯೂರುವಂತೆ ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿ, ಹಮಾಸ್‌ಗೆ ಸಂಬಂಧಿಸಿದ ಹಸಿರು ಹೆಡ್‌ಬ್ಯಾಂಡ್‌ಗಳನ್ನು ಧರಿಸಿದ ಬಂದೂಕುಧಾರಿಗಳು ಗುಂಡಿಕ್ಕಿ ಕೊಲ್ಲುವ ಅಮಾನವೀಯ ದೃಶ್ಯವನ್ನು ಕಾಣಬಹುದು. ಮೃತದೇಹಗಳ ಸುತ್ತ ನೆರೆದಿದ್ದ ಗುಂಪು ‘ಅಲ್ಲಾಹು ಅಕ್ಬರ್’ (ದೇವರು ದೊಡ್ಡವನು) ಎಂದು ಘೋಷಣೆ ಕೂಗುವುದು ಕೂಡ ಕೇಳಿಬರುತ್ತದೆ. ಯಾವುದೇ ಪುರಾವೆಗಳನ್ನು ಒದಗಿಸದೆ, ಮೃತಪಟ್ಟವರು “ಕ್ರಿಮಿನಲ್‌ಗಳು ಮತ್ತು ಇಸ್ರೇಲ್‌ನ ಸಹಯೋಗಿಗಳು” ಎಂದು ಹಮಾಸ್ ಹೇಳಿಕೆ ನೀಡಿದೆ.
“ಗಾಜಾದಲ್ಲಿ ಹಮಾಸ್ ನಿಯಂತ್ರಣ ಮರುಸ್ಥಾಪನೆ”
ಶಾಂತಿ ಒಪ್ಪಂದದ ಅನ್ವಯ ಇಸ್ರೇಲಿ ಪಡೆಗಳು ಗಾಜಾ ನಗರದಿಂದ ಹಿಂದೆ ಸರಿದ ನಂತರ, ಹಮಾಸ್ ಭದ್ರತಾ ಪಡೆಗಳು ಬೀದಿಗಳಿಗೆ ಮರಳಿವೆ. ಸಂಘರ್ಷದ ಸಮಯದಲ್ಲಿ ಪ್ರಾಬಲ್ಯ ಗಳಿಸಿದ್ದ ‘ಬಣಗಳು’ ಅಥವಾ ಕುಟುಂಬ ಆಧಾರಿತ ಸಶಸ್ತ್ರ ಗುಂಪುಗಳೊಂದಿಗೆ ಹಮಾಸ್ ಸಂಘರ್ಷಕ್ಕಿಳಿದಿದೆ. ಈ ಗುಂಪುಗಳು ಮಾನವೀಯ ನೆರವನ್ನು ಲೂಟಿ ಮಾಡಿ ಲಾಭಕ್ಕೆ ಮಾರಾಟ ಮಾಡುತ್ತಿದ್ದವು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಮಾಸ್ ಇಂತಹ “ಗ್ಯಾಂಗ್‌ಸ್ಟರ್”ಗಳನ್ನು ಹತ್ಯೆಗೈದು ತನ್ನ ನಿಯಂತ್ರಣವನ್ನು ಮರುಸ್ಥಾಪಿಸಲು ಯತ್ನಿಸುತ್ತಿದೆ.
“ಟ್ರಂಪ್ ಎಚ್ಚರಿಕೆ”
ಈ ಘಟನೆ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಹಮಾಸ್ ಕೆಲವು ದುಷ್ಟ ಗ್ಯಾಂಗ್‌ಗಳನ್ನು ಮಟ್ಟ ಹಾಕಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದರಿಂದ ನನಗೇನೂ ತೊಂದರೆ ಇಲ್ಲ,” ಎಂದಿದ್ದಾರೆ. ಆದರೆ, ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿರುವ ಅವರು, “ಅವರು ನಿಶ್ಯಸ್ತ್ರೀಕರಣಗೊಳ್ಳಬೇಕು, ಇಲ್ಲದಿದ್ದರೆ ನಾವೇ ಅವರನ್ನು ನಿಶ್ಯಸ್ತ್ರಗೊಳಿಸುತ್ತೇವೆ. ನಾವೇ ಅವರ ಶಸ್ತ್ರ ತ್ಯಜಿಸುವಂತೆ ಮಾಡಲು ಮುಂದಾದರೆ ಅದು ತ್ವರಿತ ಮತ್ತು ಬಹುಶಃ ಹಿಂಸಾತ್ಮಕವಾಗಿ ನಡೆಯಲಿದೆ,” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಹಮಾಸ್‌ನ ಈ ಕ್ರಮವು ಅಮೆರಿಕದ ಮಧ್ಯಸ್ಥಿಕೆಯ ಕದನ ವಿರಾಮಕ್ಕೆ ಹಿನ್ನಡೆ ಉಂಟುಮಾಡುವ ಸಾಧ್ಯತೆಯಿದೆ. ಕದನ ವಿರಾಮದ ಯೋಜನೆಯ ಪ್ರಕಾರ, ಹಮಾಸ್ ನಿಶ್ಯಸ್ತ್ರಗೊಂಡು ಅಂತಾರಾಷ್ಟ್ರೀಯ ಮೇಲ್ವಿಚಾರಣಾ ಸಂಸ್ಥೆಗೆ ಅಧಿಕಾರವನ್ನು ಹಸ್ತಾಂತರಿಸಬೇಕಿದೆ. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವವರೆಗೂ ಯುದ್ಧ ಕೊನೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಹಮಾಸ್ ಈ ಷರತ್ತುಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಹೀಗಾಗಿ ಗಾಜಾ, ಹಮಾಸ್‌ನ ಮುಂದಿನ ಕಥೆಯೇನು ಎಂಬ ಕುತೂಹಲ ಮೂಡಿದೆ.