ನವದೆಹಲಿ: ದೆಹಲಿಯ ಆಶ್ರಮವೊಂದರ ಸ್ವಯಂ ಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ(62) ವಿರುದ್ಧ 17ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ನಂತರ, ಸ್ವಾಮೀಜಿ ವಿರುದ್ಧ ಒಬ್ಬೊಬ್ಬರಾಗಿಯೇ ಬಾಯಿಬಿಡತೊಡಗಿದ್ದಾರೆ. 2016ರಲ್ಲಿ ಇದೇ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬರು, “ಆತನದ್ದು ರಣಹದ್ದಿನಂಥ ಕಣ್ಣು” ಎಂದು ಹೇಳಿದ್ದಾರೆ. ತಮ್ಮ ಜೀವನದ ಅತ್ಯಂತ ಸಂಕಷ್ಟದ ದಿನಗಳನ್ನು ನೆನೆದಿರುವ ಅವರು, ಆಶ್ರಮದಲ್ಲಿದ್ದಾಗ ಅನುಭವಿಸಿದ ದೌರ್ಜನ್ಯವನ್ನು ವಿವರಿಸಿದ್ದಾರೆ.
“2016ರ ಸಂತ್ರಸ್ತೆಯ ನೋವಿನ ಕಥೆ”
2016ರಲ್ಲಿ ದಾಖಲಾಗಿದ್ದ ಎಫ್‌ಐಆರ್ ಪ್ರಕಾರ, ಆಗ 20 ವರ್ಷದ ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತೆ, ಚೈತನ್ಯಾನಂದನ (ಸ್ವಾಮಿ ಪಾರ್ಥಸಾರಥಿ) ನಿರಂತರ ಕಿರುಕುಳದಿಂದಾಗಿ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ಗೆ ಸೇರಿದ ಎಂಟೇ ತಿಂಗಳಲ್ಲಿ ಸಂಸ್ಥೆಯನ್ನು ತೊರೆದಿದ್ದರು.
“ನಾನು ಸಂಸ್ಥೆಗೆ ಸೇರಿದ ತಕ್ಷಣ, ಬಾಬಾ ಅಸಭ್ಯ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ. ‘ಬೇಬಿ’, ‘ಸ್ವೀಟ್ ಗರ್ಲ್’ ಎಂದು ಕರೆಯುತ್ತಿದ್ದ. ಸಂಜೆ 6:30ಕ್ಕೆ ತರಗತಿಗಳು ಮುಗಿದ ನಂತರ ತನ್ನ ಕಚೇರಿಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದ,” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
“ನೀನು ತುಂಬಾ ಪ್ರತಿಭಾವಂತೆ” ಎಂದು ಹೇಳಿ ದುಬೈನಲ್ಲಿ ಉನ್ನತ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡುವುದಾಗಿ ಚೈತನ್ಯಾನಂದ ಆಮಿಷ ಒಡ್ಡಿದ್ದ. ಆತನ ಸಿಬ್ಬಂದಿ ಕೂಡ ಆತನಿಗೆ ಸಹಕರಿಸುವಂತೆ ಒತ್ತಡ ಹೇರುತ್ತಿದ್ದರು. ಆತ ಆಕೆಯ ಮೊಬೈಲ್ ಫೋನ್ ಕಸಿದುಕೊಂಡು, ಹಾಸ್ಟೆಲ್‌ನಲ್ಲಿ ಪ್ರತ್ಯೇಕವಾಗಿರಿಸಿ, ರೂಮಿನ ಲ್ಯಾಂಡ್‌ಲೈನ್‌ಗೆ ಪದೇ ಪದೇ ಕರೆ ಮಾಡುತ್ತಿದ್ದ.
“ಹೊರಗೆ ಡಿನ್ನರ್‌ಗೆ ಕರೆದೊಯ್ಯುವುದು, ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದ. ನನಗೆ ತುಂಬಾ ಭಯವಾಗಿತ್ತು,” ಎಂದು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಆತ ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿ, ಮಥುರಾಕ್ಕೆ ತನ್ನೊಂದಿಗೆ ಬರುವಂತೆ ಆಹ್ವಾನಿಸಿದ್ದ.
ತನ್ನ ಸುರಕ್ಷತೆಯ ಬಗ್ಗೆ ಆತಂಕಗೊಂಡು, ಆಕೆ ತನ್ನ ವಸ್ತುಗಳನ್ನೆಲ್ಲಾ ಅಲ್ಲೇ ಬಿಟ್ಟು ರಾತ್ರೋರಾತ್ರಿ ಹಾಸ್ಟೆಲ್‌ನಿಂದ ಓಡಿ ಹೋಗಿದ್ದರು. ನಂತರ ಆತನ ಅನುಯಾಯಿಗಳು ಆಕೆಯ ಮನೆಗೆ ಬಂದು ಬೆದರಿಕೆ ಹಾಕಿದಾಗ, ಆಕೆಯ ತಂದೆ ಅವರನ್ನು ಓಡಿಸಿದ್ದರು.
“ಪ್ರಸ್ತುತ ಪ್ರಕರಣ ಮತ್ತು ತನಿಖೆ”
ಪೊಲೀಸ್ ದಾಖಲೆಗಳ ಪ್ರಕಾರ, ಚೈತನ್ಯಾನಂದನ ವಿರುದ್ಧ 2009 ಮತ್ತು 2016ರಲ್ಲಿಯೂ ಲೈಂಗಿಕ ದೌರ್ಜನ್ಯದ ದೂರುಗಳು ದಾಖಲಾಗಿದ್ದವು. ಆದರೆ, ತನ್ನ ಪ್ರಭಾವ ಬಳಸಿ ಆತ ಕಾನೂನು ಕ್ರಮದಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಪ್ರಸಕ್ತ ಪ್ರಕರಣದಲ್ಲಿ, ಆಗಸ್ಟ್ ತಿಂಗಳ ಆರಂಭದಲ್ಲಿ 17 ಮಹಿಳೆಯರು ದೂರು ದಾಖಲಿಸಿದ್ದಾರೆ.
ಆರಂಭದಲ್ಲಿ ಆತ ಲಂಡನ್‌ನಲ್ಲಿದ್ದಾನೆಂದು ಭಾವಿಸಲಾಗಿತ್ತು, ಆದರೆ ನಂತರ ತನಿಖಾಧಿಕಾರಿಗಳು ಆತ ಆಗ್ರಾದಲ್ಲಿರುವುದನ್ನು ಪತ್ತೆಹಚ್ಚಿದ್ದರು.
ದೆಹಲಿ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಆತ, ನಂತರ ಅದನ್ನು ಹಿಂಪಡೆದಿದ್ದಾನೆ. ಸದ್ಯ ದೆಹಲಿ ಪೊಲೀಸರು ದೆಹಲಿ, ಹರ್ಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಆತ ದೇಶ ಬಿಟ್ಟು ಪಲಾಯನ ಮಾಡದಂತೆ ಲುಕ್‌ಔಟ್ ಸರ್ಕ್ಯುಲರ್ ಜಾರಿ ಮಾಡಲಾಗಿದೆ. ಆದರೆ, ಆತ ಇನ್ನೂ ಪತ್ತೆಯಾಗಿಲ್ಲ.