ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿತು. ಈ ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 159 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ರಾಜಸ್ಥಾನ್ ವಿರುದ್ಧ ಪ್ರಾಬಲ್ಯ ಮೆರೆದ ಗುಜರಾತ್ ತಂಡದ ಬೌಲರ್ ಗಳು ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಗೆ ಆರಂಭಿಕ ಆಘಾತ ಎದುರಾಗಿತ್ತು. ನಾಯಕ ಶುಭ್ಮನ್ ಗಿಲ್ ಕೇವಲ 2 ರನ್ ಗಳಿಸಿ ಔಟ್ ಆದರು. ಆದರೆ, ಇನ್ನೊಂದು ಬದಿಯಲ್ಲಿ ಸಾಯಿಸುದರ್ಶನ್ ಉತ್ತಮ ಆಟ ಪ್ರದರ್ಶಿಸಿದರು. ಸಾಯಿಸುದರ್ಶನ್ 53 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ 82 ರನ್ ಗಳಿಸಿದರು. ಜೋಸ್ ಬಟ್ಲಸ್ 36(25), ಶಾರೂಖ್ ಖಾನ್ 36(20), ರುಥರ್ ಫೋರ್ಡ್ 7, ರಾಹುಲ್ ಥೆವಾಟಿಯಾ 24, ರಶೀದ್ ಖಾನ್ 12 ರನ್ ಗಳಿಸಿ ಮಿಂಚಿ ತಂಡದ ಮೊತ್ತ 217 ರನ್ ಆಗಲು ಕಾರಣರಾದರು. ಆರ್ ಆರ್ ಪರ ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡದ ಬ್ಯಾಟ್ಸಮನ್ ಗಳು ಗುಜರಾತ್ ಬೌಲರ್ ಗಳ ಎದುರು ಮಂಡಿಯೂರಿದರು. ಈ ಪಂದ್ಯದಲ್ಲೂ ಯಶಸ್ವಿ ಜೈಸ್ವಾಲ್ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದರು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 6 ರನ್ ಗಳಿಗೆ ಸುಸ್ತಾದರು. ಸಂಜು ಸ್ಯಾಮ್ಸನ್ 41, ನಿತೀಶ್ ರಾಣಾ 1, ರಿಯಾನ್ ಪರಾಗ್ 26, ಧ್ರುವ ಜುರೆಲ್ 5, ಹೆಟ್ಮೆರ್ 52 ರನ್ ಗಳಿಸಿದರು. ನಂತರ ಬಂದವರು ಯಾವುದೇ ಪ್ರತಿರೋಧ ಒಡ್ಡದ ಹಿನ್ನೆಲೆಯಲ್ಲಿ ತಂಡ 19.2 ಓವರ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಸೋಲು ಕಂಡಿತು. ಗುಜರಾತ್ ಪರ ಪ್ರಸಿದ್ಧ ಕೃಷ್ಣ 3 ವಿಕೆಟ್, ರಶೀದ್ ಖಾನ್, ಸಾಯಿಕಿಶೋರೆ ತಲಾ 2 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿತು. ರಾಜಸ್ಥಾನ್ ತಂಡ 7ನೇ ಸ್ಥಾನದಲ್ಲಿ ಉಳಿಯಿತು.



















