ಬೆಂಗಳೂರು: ಕೇಂದ್ರ ಸರ್ಕಾರವು ದೇಶದ ಜನರಿಗೆ ಗುಡ್ ನ್ಯೂಸ್ ನೀಡಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸ್ಲ್ಯಾಬ್ ಗಳನ್ನು 4ರಿಂದ 2ಕ್ಕೆ ಇಳಿಸುವ ಮೂಲಕ ಜನರಿಗೆ ಆಗುವ ತೆರಿಗೆ ಹೊರೆಯನ್ನು ಕಡಿಮೆ ಮಾಡಲಾಗಿದೆ. ಹೊಸ ತೆರಿಗೆ ಸ್ಲ್ಯಾಬ್ ಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ. ಆದರೂ, 5, 10, 20 ರೂಪಾಯಿ ಪ್ಯಾಕ್ ಗಳು ಅಥವಾ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗುವುದಿಲ್ಲ ಎಂದು ತಿಳಿದುಬಂದಿದೆ.
ಹೌದು, ಬಿಸ್ಕತ್ತು ಸೇರಿ ಹಲವು ಪ್ಯಾಕ್ ಗಳ ಬೆಲೆಯು 5, 10 ಹಾಗೂ 20 ರೂಪಾಯಿ ಇರುತ್ತದೆ. ಮೊದಲು 20 ರೂಪಾಯಿ ಬಿಸ್ಕತ್ ಪ್ಯಾಕೆಟ್ ಗೆ ಶೇ.18ರಷ್ಟು ಜಿಎಸ್ ಟಿ ಇತ್ತು. ಈಗ ಅದನ್ನು ಶೇ.5ಕ್ಕೆ ಇಳಿಸಲಾಗಿದೆ. ಆದರೂ, ಇವುಗಳ ಬೆಲೆಯನ್ನು ಇಳಿಸಲು ಆಗುವುದಿಲ್ಲ ಎಂದು ಕ್ಷಿಪ್ರವಾಗಿ ಮಾರಾಟವಾಗುತ್ತಿರುವ ಸರಕುಗಳ ಕಂಪನಿ (ಎಫ್ಎಂಸಿಜಿ)ಗಳು ತಿಳಿಸಿವೆ.
5, 10, 20 ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸುವವರ ಸಂಖ್ಯೆ ಜಾಸ್ತಿ ಇರುತ್ತದೆ. ಹಾಗಾಗಿ, ಇವುಗಳ ಮೇಲಿನ ಜಿಎಸ್ ಟಿ ಹೊರೆಯನ್ನು ಕಡಿಮೆ ಮಾಡಲಾಗಿದೆ. ಆದರೆ, ಜಿಎಸ್ ಟಿ ಇಳಿಸುತ್ತೇವೆ ನಿಜ. ಆದರೆ, ಪ್ಯಾಕ್ ಗಳ ಕ್ವಾಂಟಿಟಿ ಜಾಸ್ತಿ ಮಾಡುತ್ತೇವೆ. ಇದಾದ ಬಳಿಕವೂ ಪ್ಯಾಕ್ ಗಳ ಬೆಲೆಯು ಈಗಿರುವಷ್ಟೇ ಇರುತ್ತದೆ ಎಂದು ಎಫ್ಎಂಸಿಜಿ ಮೂಲಗಳು ತಿಳಿಸಿವೆ.
ಹೀಗೆ ಮಾಡುವುದರಿಂದ ಗ್ರಾಹಕರಿಗೆ ಹಣ ಉಳಿತಾಯವಾಗುವುದಿಲ್ಲ ನಿಜ. ಆದ್ರೆ, ಪ್ಯಾಕ್ ಗಳ ಸೈಜ್ ಜಾಸ್ತಿಯಾಗುವ ಕಾರಣ ಕಡಿಮೆ ಬೆಲೆಗೆ ಹೆಚ್ಚಿನ ಪ್ರಮಾಣದ ಉತ್ಪನ್ನ ಸಿಗಲಿದೆ. ಇದು ಕೂಡ ಗ್ರಾಹಕರಿಗೆ ಒಂದು ಅನುಕೂಲವೇ ಸರಿ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 22ರಿಂದ ಶೇ.5 ಹಾಗೂ ಶೇ.18ರ ಸ್ಲ್ಯಾಬ್ ಗಳು ಮಾತ್ರ ದೇಶದಲ್ಲಿ ಇರಲಿವೆ. ಉಳಿದ ಶೇ.12 ಹಾಗೂ ಶೇ.28ರ ಸ್ಲ್ಯಾಬ್ ಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.