ಬ್ರಿಟನ್ ಸಂಸತ್ ನ ಕೆಳಮನೆ ಹೌಸ್ ಆಫ್ ಕಾಮನ್ಸ್‌ಗೆ ನಡೆದ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಬರೋಬ್ಬರಿ 14 ವರ್ಷಗಳ ನಂತರ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದೆ. ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಸಾರಥ್ಯದ ಕನ್ಸರ್ವೇಟಿವ್ ಪಕ್ಷ ಈ ಬಾರಿ ಹೀನಾಯ ಸೋಲು ಕಂಡಿದೆ.
ಸಂಸತ್‌ನ 650 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ 412 ಸ್ಥಾನ ಗಳಿಸಿದರೆ, ಆಡಳಿತಾರೂಢ ಕನ್ಸರ್ವೇಟಿವ್‌ಪಕ್ಷ 121 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲು ಯಶ ಕಂಡಿತು.. ಪ್ರಧಾನಿ ಎಂದು ಬಿಂಬಿತವಾಗಿದ್ದ ಲೇಬರ್ ಪಕ್ಷದ ಕೀರ್ ಸ್ಟಾರ್ಮರ್ ಪಕ್ಷದ ಗೆಲುವಿನ ಬಗ್ಗೆ ಅಧಿಕೃತ ಘೋಷಣೆಗೂ ಮುನ್ನವೇ ಲಂಡನ್‌ನಲ್ಲಿ ವಿಜಯೋತ್ಸವದ ಭಾಷಣ ಮಾಡಿದರು.

ಬ್ರಿಟನ್ ನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಪರಿವರ್ತನೆಯ ಕೆಲಸ ರಂಭಿಸುತ್ತೇವೆ. ನಾವು ಮತ್ತೊಮ್ಮೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾದಿಯಲ್ಲಿದ್ದೇವೆ. ಇದಕ್ಕಾಗಿ ನವ ಮನ್ವಂತರಕ್ಕೆ ಬುನಾದಿ ಹಾಕಲಾಗುವುದು ಎಂದು ಸ್ಟಾರ್ಮರ್ ಹೇಳಿದ್ದಾರೆ.
ಈ ಬಾರಿ ಇಂಗ್ಲೆಂಡ್ ಜನರು ಜನರು ಬದಲಾವಣೆಗೆ ಮತ ನೀಡಿದ್ದಾರೆ. 14 ವರ್ಷದ ಕನ್ಸರ್ವೇಟಿವ್ ಆಡಳಿತ ಅಂತ್ಯಗೊಳಿಸಿ ಲೇಬರ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಪರಿವರ್ತನೆನೆ ಇಲ್ಲಿಂದಲೇ ಆರಂಭವಾಗಲಿದೆ. ಏಕೆಂದರೆ ಇದು ನಿಮ್ಮ ಪ್ರಜಾಪ್ರಭುತ್ವ. ನಿಮ್ಮ ಸಮುದಾಯ, ನಿಮ್ಮ ಭವಿಷ್ಯ ಗಮನದಲ್ಲಿಟ್ಟುಕೊಂಡು ಮತ ನೀಡಿದ್ದೀರಿ. ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡುವೆ,” ಎಂದು ಸ್ಟಾರ್ಮರ್ ಹೇಳಿದ್ದಾರೆ.
ಅಭಿವೃದ್ಧಿ, ಆರೋಗ್ಯ, ಹಸಿರು ಇಂಧನ, ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕುವುದು ಹಾಗೂ ಶಿಕ್ಷಣ ಕ್ಷೇತ್ರ ಸುಧಾರಣೆಯ ಪಂಚಸೂತ್ರಗಳನ್ನು ಮುಂದಿಟ್ಟುಕೊಂಡು ಕೀರ್ ಸ್ಟಾರ್ಮರ್ ಪ್ರಚಾರ ನಡೆಸಿದ್ದರು. ಚುನಾವಣೆಯಲ್ಲಿಲೇಬರ್ ಪಕ್ಷ ಬಹುಮತ ಪಡೆಯುತ್ತಿದ್ದಂತೆ ಪಕ್ಷದ ಹಿರಿಯ ನಾಯಕ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿಯಾಗಿ ಬ್ರಿಟನ್ ದೊರೆ ಚಾರ್ಲ್ಸ್-3 ಅವರು ಶುಕ್ರವಾರ ನೇಮಕ ಮಾಡಿದರು. ಹೊಸ ಸರಕಾರ ರಚಿಸುವಂತೆ ನಿಯೋಜಿತ ಪ್ರಧಾನಿ ಸ್ಟಾರ್ಮರ್‌ಗೆ ರಾಜ ಚಾರ್ಲ್ಸ್-3 ಆಹ್ವಾನ ನೀಡಿದ್ದಾರೆ ಎಂದು ಅಲ್ಲಿನ ಅರಮನೆಯ ಪ್ರಕಟಣೆ ಹೇಳಿದೆ.

ಸಾರ್ವತ್ರಿಕ ಚುನಾವಣೆಯಲ್ಲಿಕನ್ಸರ್ವೇಟಿವ್ ಪಕ್ಷದ ಸೋಲಿನ ಹೊಣೆಯನ್ನು ಪ್ರಧಾನಿ ರಿಷಿ ಸುನಕ್ ಕೂಡ ಹೊತ್ತುಕೊಂಡಿದ್ದಾರೆ. ಫಲಿತಾಂಶದ ನಂತರ ಪ್ರಧಾನಿ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ ನೀಡಿದ್ದಾರೆ. ಲೇಬರ್ ಪಕ್ಷ ಚಾರಿತ್ರಿಕ ಜಯ ಸಾಧಿಸಿದೆ. ಮುಂದಿನ ಪ್ರಧಾನಿ ಕೀರ್ ಸ್ಟಾರ್ಮರ್‌ಗೆ ಅಭಿನಂದನೆ ಸಲ್ಲಿಸುವೆ. ಕನ್ಸರ್ವೇಟಿವ್ ಪಕ್ಷದ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ. ಅಧಿಕಾರ ಇಲ್ಲದಿದ್ದರೂ ಜನ ಸೇವೆ ಮುಂದುವರಿಸುವೆ ಎಂದು ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅಭಿಪ್ರಾಯ ಪಟ್ಟಿದ್ದಾರೆ.
ಸಂಸತ್ ಚುನಾವಣೆಯಲ್ಲಿ ಭಾರತೀಯ ಮೂಲದವರು ಕೂಡ ಭರ್ಜರಿ ಸಾಧನೆ ಮಾಡಿದ್ದಾರೆ. ಒಟ್ಟು 26 ಜನ ಭಾರತೀಯ ಮೂಲದವರು ಜಯ ಗಳಿಸಿದ್ದಾರೆ. ರಿಷಿ ಸುನಕ್ ತಮ್ಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಸುನಕ್ ಸಂಪುಟದದಲ್ಲಿದ್ದ ಸುಯೆಲ್ಲಾಬ್ರೇವ್‌ರ್ಮನ್, ಪ್ರೀತಿ ಪಟೇಲ್, ಗೋವಾ ಮೂಲದ ಕ್ಲಾರಿ ಕುಟಿನ್ಹೊ, ಗಗನ್ ಮಹೀಂದ್ರಾ, ಶಿವಾನಿ ರಾಜ ಜಯ ಸಾಧಿಸಿದ್ದಾರೆ.
ಸೀಮಾ ಮಲ್ಹೋತ್ರಾ, ವಲೇರಿ ವಾಜ್, ಲಿಸಾ ನ್ಯಾಂಡಿ, ಪ್ರೀತ್ ಕೌರ್ ಗಿಲ್, ತನ್‌ಮನ್‌ಜೀತ್ ಸಿಂಗ್,ಜಸ್ ಅತ್ವಾಲ್, ಬಗ್ಗಿ ಶಂಕರ್, ಸತ್ವೀರ್‌ಕೌರ್, ಹರ್‌ಪ್ರೀತ್ ಉಪ್ಪಲ್, ವರಿಂದರ್ ಜಸ್, ಗುರಿಂದರ್‌ಜೋಸನ್, ಕನಿಷ್ಕ ನಾರಾಯಣ್, ಸೋನಿಯಾ ಕುಮಾರ್, ಸುರೀನಾ ಬ್ರಕೆನ್‌ಬಿಜ್, ಕೀರ್ತಿ ಎಂಟ್ವಿಸಲ್, ಜೀವನ್ ಸಂದೆರ್, ಸೋಜನ್ ಜೋಸೆಫ್ ಲೇಬರ್ ಪಕ್ಷದಿಂದ ಸಂಸತ್‌ಗೆ ಆಯ್ಕೆಯಾದ ಭಾರತೀಯ ಮೂಲದ ಸಂಸದರು ಎನ್ನಲಾಗಿದೆ.
ಬ್ರಿಟನ್ ಚುನಾವಣೆಯಲ್ಲಿಗೆಲುವು ಸಾಧಿಸಿದ ಲೇಬರ್ ಪಕ್ಷದ ಪ್ರಧಾನಿ ಅಭ್ಯರ್ಥಿ ಕೀರ್ ಸ್ಟಾರ್ಮರ್‌ಗೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ. ಸ್ಟಾರ್ಮರ್‌ಗೆ ಸಲ್ಲಿಸಿದ ಅಭಿನಂದನಾ ನುಡಿಯಲ್ಲಿ”ಭಾರತ-ಬ್ರಿಟನ್ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಧನಾತ್ಮಕ ಸಹಯೋಗದ ಕುರಿತು ಎದುರು ನೋಡುತ್ತಿದ್ದೇವೆ,” ಎಂದು ಮೋದಿ ಹೇಳಿದ್ದಾರೆ. ಇದೇ ವೇಲೆ ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರಿಗೂ ಧನ್ಯವಾದ ಸಲ್ಲಿಸಿರುವ ಮೋದಿ ನಿಮ್ಮ ನಾಯಕತ್ವದಲ್ಲಿಭಾರತ-ಬ್ರಿಟನ್ ಸಂಬಂಧ ಹೊಸ ಎತ್ತರ ತಲುಪಿದೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿನಿಮ್ಮ ಕೊಡುಗೆ ಸ್ಮರಣೀಯ ಎಂದು ಹೇಳಿದ್ದಾರೆ.
ಕೀರ್ ಸ್ಮಾರ್ಮ್ 1962ರ ಸೆ.2ರಂದು ಲಂಡನ್‌ನ ಸೌತ್ ವಾಕ್ ನಲ್ಲಿ ಜನಿಸಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. 16ನೇ ವಯಸ್ಸಿನಿಂದಲೇ ರಾಜಕೀಯ ಜೀವನ ಆರಂಭಿಸಿದ್ದರು. ಅವರು ಅಂದಿನಿಂದಲೂ ಲೇಬರ್ ಪಕ್ಷದೊಂದಿಗೆ ಗುರುತಿಸಿಕೊಂಡು ಪಕ್ಷ ಸಂಘಟನೆ ಮಾಡಿದ್ದರು. 2015ರಿಂದಲೂ ಹೌಸ್ ಆಫ್ ಕಾಮನ್ಸ್ ಸದಸ್ಯರಾಗಿದ್ದರು. ಆನಂತರ ಇವರು 2020ರಿಂದ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರತಿ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ಸಂಸತ್ ಗೆ ಒಟ್ಟು ಸ್ಥಾನ 650 ಸ್ಥಾನಗಳಿದ್ದವು. ಈಗ ಹೊರ ಬಿದ್ದ ಫಲಿತಾಂಶದಲ್ಲಿ ಲೇಬರ್ ಪಕ್ಷ 412 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕನ್ಸರ್ವೇಟಿವ್ ಪಕ್ಷ 121, ಲಿಬರಲ್ ಡೆಮೋಕ್ರಾಟ್ಸ್ 71 ಹಾಗೂ ಇನ್ನಿತರರು 46 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದಾರೆ. ಭಾರತೀಯ ಮೂಲದ ರಿಷಿ ಕ್ಷೇತ್ರದಲ್ಲಿ ಗೆಲುವು ಕಂಡು, ಮತ್ತೊಮ್ಮೆ ಪ್ರಧಾನಿಯಾಗುವಲ್ಲಿ ವಿಫಲವಾಗಿದ್ದಾರೆ. ಆದರೆ, ಭಾರತೀಯ ಮೂಲದವರ ಗೆಲುವು ಭಾರತೀಯ ಜನರ ಸಂತಸಕ್ಕೆ ಕಾರಣವಾಗಿದೆ.