ಸಾಮಾನ್ಯವಾಗಿ ಚುನಾವಣೆಯಲ್ಲಿ ಸರ್ಕಾರಗಳು ರಚನೆಯಾಗುತ್ತಿದ್ದಂತೆ ಜನ ಸಾಮಾನ್ಯರಿಗೆ ಏನಾದರೊಂದು ಖುಷಿಯ ಗಿಫ್ಟ್ ಸಿಗುತ್ತದೆ. ಅಧಿಕಾರ ರಚನೆಯಾದ ಖುಷಿಯಲ್ಲಿ ನಾಯಕರು ಏನಾದರೂ ಒಂದು ಯೋಜನೆ ಘೋಷಿಸಿ, ಜನರ ಸಂತಸಕ್ಕೆ ಕಾರಣವಾಗುತ್ತಿರುತ್ತವೆ. ಆದರೆ, ಇಂಗ್ಲೆಂಡ್ ನಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಜೈಲಿನಲ್ಲಿದ್ದ ಕೈದಿಗಳಿಗೂ ಉಡುಗೊರೆ ಸಿಕ್ಕಿದೆ.
ಹೌದು! ಇಂಗ್ಲೆಂಡ್ ನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ತಡ ಕೈದಿಗಳಿಗೂ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಬ್ರಿಟನ್ ದೇಶದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಲೇಬರ್ ಪಕ್ಷದ ಸರ್ಕಾರ, ದ ಜೈಲುಗಳಲ್ಲಿ ಬಂಧಿಯಾಗಿರುವ ಕೈದಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ! ಕೈದಿಗಳಿಗೆ ನ್ಯಾಯಾಲಯ ವಿಧಿಸಿದ ಒಟ್ಟು ಶಿಕ್ಷೆಯ ಅವಧಿ ಪೈಕಿ ಕೇವಲ ಶೇ. 40ರಷ್ಟು ಶಿಕ್ಷೆಯ ಅವಧಿ ಪೂರೈಸಿದ್ದರೂ ಸಾಕು, ಅಂತಹ ಕೈದಿಗಳನ್ನು ಬಿಡುಗಡೆ ಮಾಡಲು ಕಾನೂನು ರೂಪಿಸುವುದಾಗಿ ಹೇಳಿದೆ. ಈ ಮೂಲಕ ಬ್ರಿಟನ್‌ನಲ್ಲಿ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲೇ ಮಹತ್ವದ ನಿರ್ಣಯ ಇದಾಗಿದ್ದು, ಜೈಲಿನಲ್ಲಿರುವ ಕೈದಿಗಳು ಕೂಡ ಸಂತಸ ಪಡುವಂತಾಗಿದೆ.

ಈಗಾಗಲೇ ಅಪರಾಧ ಕೃತ್ಯಗಳಿಂದಾಗಿ ಬ್ರಿಟನ್ ದೇಶದ ಎಲ್ಲ ಬಂದೀಖಾನೆಗಳೂ ಕೈದಿಗಳಿಂದ ತುಂಬಿ ತುಳುಕುತ್ತಿವೆ. ಬಹುತೇಕ ಜೈಲುಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನ ಹೊಂದಿವೆ. ಇಂಗ್ಲೆಂಡ್ ಹಾಗೂ ವೇಲ್ಸ್‌ನ ಕಾರಾಗೃಹಗಳು ಇನ್ನು ಕೆಲವೇ ವಾರಗಳಲ್ಲಿ ಭರ್ತಿಯಾಗಲಿವೆ ಎಂದು ಎರಡೂ ಪ್ರಾಂತ್ಯದ ಗವರ್ನರ್‌ಗಳು ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ಸರ್ಕಾರದ ಈ ಹೊಸ ನೀತಿ, ಕೈದಿಗಳಿಗೆ ಸಂತಸ ನೀಡಿರುವುದು ಓಕೆ. ಆದರೆ, ಅಪರಾಧ ಕೃತ್ಯಕ್ಕೆ ದಾರಿ ಮಾಡಿ ಕೊಟ್ಟಂತಾಗುವುದಿಲ್ಲವೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಬ್ರಿಟನ್‌ನ ನ್ಯಾಯ ಸಚಿವಾಲಯ ಕಾರಾಗೃಹಗಳು ಎದುರಿಸುತ್ತಿರುವ ಅತಿಯಾದ ಒತ್ತಡವನ್ನು ಕಡಿಮೆ ಮಾಡಲು ಹಲವು ರೀತಿ ಕಾರ್ಯತಂತ್ರಗಳನ್ನ ರೂಪಿಸುತ್ತಿದ್ದು, ಈ ಪೈಕಿ ಕೈದಿಗಳ ಶಿಕ್ಷೆ ಅವಧಿ ಕಡಿಮೆ ಮಾಡೋದೂ ಕೂಡಾ ಒಂದು ಉಪಾಯವಾಗಿದೆ ಎನ್ನಲಾಗುತ್ತಿದೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಾರಥ್ಯದ ಲೇಬರ್ ಪಕ್ಷದ ಸರ್ಕಾರ ಬ್ರಿಟನ್‌ನ ಜೈಲುಗಳಲ್ಲಿ ಕೈದಿಗಳ ಒತ್ತಡ ಕಡಿಮೆ ಮಾಡಲು ಹಲವು ಪ್ರಸ್ತಾಪಗಳನ್ನ ಮಂಡಿಸಿದ್ದು, ಈ ಪೈಕಿ ಶೇ. 40 ರಷ್ಟು ಶಿಕ್ಷೆಯ ಅವಧಿ ಪೂರ್ಣಗೊಂಡವರನ್ನ ಬಿಡುಗಡೆ ಮಾಡೋದೂ ಒಂದು ಪ್ರಸ್ತಾಪವಾಗಿದೆ ಎಂದು ಸರ್ಕಾರದ ಮೂಲಗಳು ದಿ ಗಾರ್ಡಿಯನ್ ಸುದ್ದಿ ಸಂಸ್ಥೆಗೆ ಹೇಳಿವೆ. 2024ರ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸರ್ಕಾರಕ್ಕೆ ಜೈಲುಗಳಲ್ಲಿನ ಕೈದಿಗಳ ಸಂಖ್ಯೆ ಹೆಚ್ಚಳವೇ ಮೊದಲ ಸವಾಲಾಗಿ ಹೊರ ಹೊಮ್ಮಿದೆ. ಬ್ರಿಟನ್ ದೇಶದ ಹಲವು ರಾಜ್ಯಗಳ ಗವರ್ನರ್‌ಗಳು ಈ ಸಂಬಂಧ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ಅದರಲ್ಲೂ ಬ್ರಿಟನ್ ಹಾಗೂ ವೇಲ್ಸ್ ಕಾರಾಗೃಹಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿತ್ತು ಎನ್ನಲಾಗಿದೆ. ಹೀಗಾಗಿಯೇ ಕೈದಿಗಳಿಗೂ ಆಫರ್ ಘೋಷಿಸಲಾಗಿದೆ.
ಆದರೆ, ಶೇ. 40ರಷ್ಟು ಶಿಕ್ಷೆ ಅವಧಿ ಪೂರೈಸಿದ ಎಲ್ಲ ಕೈದಿಗಳಿಗೂ ಈ ಆಫರ್ ಅನ್ವಯ ಆಗುವುದಿಲ್ಲ. ಭಯೋತ್ಪಾದನೆ, ಲೈಂಗಿಕ ದೌರ್ಜನ್ಯ, ಹಿಂಸಾಚಾರ ಹಾಗೂ ಹಲವು ರೀತಿಯ ಗಂಭೀರ ಅಪರಾಧ ಪ್ರಕರಣಗಳ ಅಡಿ ಜೈಲು ಸೇರಿರುವ ಕೈದಿಗಳಿಗೆ ಈ ಸೌಲಭ್ಯ ಸಿಗುವುದಿಲ್ಲ. ಗಂಭೀರ ಅಪರಾಧ ಕೃತ್ಯ ಎಸಗಿದ ಅಪರಾಧಿಗಳು ಶೇ. 40 ರಷ್ಟು ಶಿಕ್ಷೆ ಪ್ರಮಾಣ ಪೂರೈಸಿದರೂ ಬಿಡುಗಡೆಯ ಭಾಗ್ಯ ಪಡೆಯುವುದಿಲ್ಲ. ಆದರೂ ಈ ಎಲ್ಲಾ ವಿಚಾರಗಳ ಕುರಿತಾಗಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಬ್ರಿಟನ್ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಈ ಕುರಿತಾಗಿ ಮಾರ್ಗಸೂಚಿ ರಚನೆ ಮಾಡಲಾಗುತ್ತಿದೆ. ಸೂಕ್ತ ನಿರ್ಧಾರ ಕೈಗೊಂಡ ಬಳಿಕ ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೂ ಅಲ್ಲದ ತಪ್ಪಿಗೆ, ಅನಿವಾರ್ಯ ಕಾರಣದ ತಪ್ಪಿಗೆ ಜೈಲು ಪಾಲಾಗಿರುವ ಕೈದಿಗಳಿಗೆ ಈ ಕಾನೂನು ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿದೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರಂತೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಮೂಲದ ರಿಷಿ ಸೋನಕ್ ತೀವ್ರ ಮುಖಭಂಗ ಅನುಭವಿಸಿದ್ದಾರೆ. ತಮ್ಮ ಕ್ಷೇತ್ರ ಗೆದ್ದರೂ ಅಧಿಕಾರದ ಗದ್ದುಗೆಗೆ ಏರಲು ಅವರ ಪಕ್ಷ ವಿಫಲವಾಗಿದೆ.