ಪ್ರಯಾಗ್ ರಾಜ್: ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ ಪ್ರಯಾಗ್ ರಾಜ್ ನ(Prayag Raj) ಮಹಾಕುಂಭಮೇಳದಲ್ಲಿ ಭಕ್ತಿಯ ಸಾಗರ ಉಕ್ಕಿ ಹರಿಯಿತು. ಬೆಳ್ಳಂಬೆಳಗ್ಗೆಯೇ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ ಪುನೀತರಾದರು. ಇದು ಈ ಕುಂಭಮೇಳದ ಮೊದಲ ಅಮೃತ ಸ್ನಾನವಾಗಿದ್ದು, ಮುಂಜಾನೆ 11.30ರವರೆಗೆ ಬರೋಬ್ಬರಿ 1.38 ಕೋಟಿ ಜನರು ಸಂಗಮದಲ್ಲಿ ಮಿಂದೆದ್ದಿದ್ದಾರೆ.
ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು, ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಹೇಳಿದ್ದಾರೆ. “ಇಂದು ಮಹಾ ಕುಂಭದ ಅಮೃತ ಸ್ನಾನದ ಮೊದಲ ದಿನ. ಜಗತ್ತಿನ ಮೂಲೆ ಮೂಲೆಗಳಿಂದಲೂ ಜನರು ಮಹಾಕುಂಭವನ್ನು ಕಣ್ತುಂಬಿಕೊಳ್ಳಲೆಂದು ಆಗಮಿಸುತ್ತಿದ್ದಾರೆ. ಸೋಮವಾರ ಸುಮಾರು 1.75 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ(Triveni Sangam) ಪುಣ್ಯ ಸ್ನಾನ ಮಾಡಿದ್ದಾರೆ” ಎಂದು ಹೇಳಿದರು.
ಶ್ರೀ ಪಂಚಾಯತ್ ಅಖಾಡ ಮಹಾನಿರ್ವಾಣಿ ಮತ್ತು ಶ್ರೀ ಶಂಭು ಪಂಚಾಯತ್ ಅಟಲ್ ಅಖಾಡ. ‘ಅಮೃತ ಸ್ನಾನ’ ಕೈಗೊಂಡವರಲ್ಲಿ ಮೊದಲಿಗರು ಎನ್ನಲಾಗಿದೆ. ಒಟ್ಟು 13 ಅಖಾಡಗಳು ಇದರಲ್ಲಿ ಭಾಗವಹಿಸುತ್ತಿದ್ದು, ಪ್ರತಿ ಅಖಾಡಕ್ಕೂ ಪುಣ್ಯ ಸ್ನಾನಗೈಯ್ಯಲು ತಲಾ 40 ನಿಮಿಷಗಳ ಸಮಯ ನೀಡಲಾಗಿದೆ. ತೀವ್ರ ಚಳಿಯಿರುವ ಕಾರಣ ಹೆಪ್ಪುಗಟ್ಟುವ ನೀರನ್ನೂ ಲೆಕ್ಕಿಸದೇ ಭಕ್ತರು ಗುಂಪುಗಳಾಗಿ ಸ್ನಾನದ ಪ್ರದೇಶದತ್ತ ಸಾಗುತ್ತಿದ್ದಂತೆ ‘ಹರ ಹರ ಮಹಾದೇವ್’, ‘ಜೈ ಶ್ರೀ ರಾಮ್’ ಮತ್ತು ‘ಜೈ ಗಂಗಾ ಮೈಯ್ಯಾ’ ಘೋಷಣೆಗಳು ಮೊಳಗಿದವು.

ಇದೇ ವೇಳೆ, ಸಂಗಮದಲ್ಲಿ ಜನಸಂದಣಿ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಡೇ ಹನುಮಾನ್ ದೇಗುಲವನ್ನು ಮಂಗಳವಾರ ಮುಚ್ಚಲಾಗಿದೆ ಎಂದು ಪ್ರಯಾಗ್ ರಾಜ್ ಆಡಳಿತ ತಿಳಿಸಿದೆ.
ಈ ಮಹಾ ಕುಂಭದ ಮೊದಲ ‘ಅಮೃತ ಸ್ನಾನ’ ಮಂಗಳವಾರ ಬೆಳಿಗ್ಗೆ 5.30 ಕ್ಕೆ ಪ್ರಾರಂಭವಾಗಿದೆ ಎಂದು ಅಖಿಲ ಭಾರತೀಯ ಅಖಾರಾ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಂತ್ ರವೀಂದ್ರ ಪುರಿ(Mahant Rabindra Puri) ತಿಳಿಸಿದ್ದಾರೆ. ಕುಂಭಮೇಳಕ್ಕೆ ಸಂಬಂಧಿಸಿದ ಸಾಮಾನ್ಯ ಪದಗಳಾದ ‘ಶಾಹಿ ಸ್ನಾನ್’ ಮತ್ತು ‘ಪೇಶ್ವಾಯಿ’ ಅನ್ನು ಕ್ರಮವಾಗಿ ‘ಅಮೃತ್ ಸ್ನಾನ್’ ಮತ್ತು ‘ಚಾವ್ನಿ ಪ್ರವೇಶ್’ ಎಂದು ಬದಲಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. “ನಾವೆಲ್ಲರೂ ಈವರೆಗೆ ಹಿಂದಿ ಮತ್ತು ಉರ್ದು ಪದಗಳನ್ನು ಬಳಸುತಿದ್ದೆವು.
ಈ ಬಾರಿ ಸಂಸ್ಕೃತ ಭಾಷೆಯ ಪದಗಳನ್ನು ಬಳಸಲು ನಿರ್ಧರಿಸಿದ್ದೇವೆ. ಇದನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ಮಾಡುವುದು ನಮ್ಮ ಉದ್ದೇಶವಲ್ಲ” ಎಂದು ಹೇಳಿದರು.
“ಮಹಾ ಕುಂಭಮೇಳದಲ್ಲಿ ಎರಡು ಸ್ನಾನಗಳು ಸತತ ದಿನಗಳಲ್ಲಿ ನಡೆಯುವುದು ಅಪರೂಪ ಮತ್ತು ದೈವಿಕ ಕಾಕತಾಳೀಯ. ‘ಪುಷ್ಯ ಪೂರ್ಣಿಮಾ’ದ ಪ್ರಮುಖ ‘ಸ್ನಾನ’ ಸೋಮವಾರ ಮತ್ತು ಮಕರ ಸಂಕ್ರಾಂತಿ ಮಂಗಳವಾರ ನಡೆದಿದೆ ಎಂದು ಅವರು ಹೇಳಿದರು.