ವಿಶ್ವ ಚಾಂಪಿಯನ್ ಡಿ.ಗುಕೇಶ್ ಗೆ (D. Gukesh) ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ (R. Prajnananda) ಸೋಲಿನ ರುಚಿ ತೋರಿಸಿದ್ದಾರೆ.
ನೆದರ್ ಲ್ಯಾಂಡ್ ನ ವಿಜ್ಕ್ ಆನ್ ಝೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿಯ ಫೈನಲ್ ಪಂದ್ಯವನ್ನು ಆರ್ ಪ್ರಜ್ಞಾನಂದ ಗೆದ್ದು ಬೀಗಿದ್ದಾರೆ. ಭಾನುವಾರ ನಡೆದ ಅಂತಿಮ ಸುತ್ತಿನಲ್ಲಿ ಭಾರತೀಯ ಚೆಸ್ ಚತುರರ ಮಧ್ಯೆಯೇ ಫೈನಲ್ ಪಂದ್ಯ ನಡೆಯಿತು.
ಬ್ಲಿಟ್ಜ್ ಪ್ಲೇ ಆಫ್ ಗಳಲ್ಲಿ ಪ್ರಜ್ಞಾನಂದ, ಗುಕೇಶ್ ವಿರುದ್ಧ ಮೊದಲ ಸುತ್ತಿನಲ್ಲಿ ಸೋಲು ಕಂಡರು. ಆನಂತರ ಸತತ ಎರಡೂ ಗೇಮ್ ಗಳನ್ನು ಗೆದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿದರು.
ಟ್ರೈಬ್ರೇಕರ್ ನಲ್ಲಿ ಚಾಂಪಿಯನ್
ಟೂರ್ನಿಯ ಫೈನಲ್ ಸುತ್ತಿನ ಮುಕ್ತಾಯಕ್ಕೆ ಡಿ. ಗುಕೇಶ್ ಅಗ್ರಸ್ಥಾನ ಅಲಂಕರಿಸಿದರೆ, ಆರ್. ಪ್ರಜ್ಞಾನಂದ ದ್ವಿತೀಯ ಸ್ಥಾನ ಪಡೆದಿದ್ದರು. ಇಬ್ಬರು 8.5 ಅಂಕಗಳನ್ನು ಹೊಂದಿದ್ದರಿಂದ ಚಾಂಪಿಯನ್ ನಿರ್ಣಾಯಕಕ್ಕಾಗಿ ಟ್ರೈ ಬ್ರೇಕರ್ ಮೊರೆ ಹೋಗಲಾಯಿತು. ಈ ನಿರ್ಣಾಯಕ ಸುತ್ತಿನಲ್ಲಿ ಗೆಲುವು ಸಾಧಿಸುವುದರ ಮೂಲಕ ಆರ್. ಪ್ರಜ್ಞಾನಂದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೂರ್ನಿಯಲ್ಲಿ ಚಾಂಪಿಯನ್ ಹೊರ ಹೊಮ್ಮಿದರು. ಆದರೂ ಈ ಟೂರ್ನಿಯಲ್ಲಿ ಅತ್ಯಧಿಕ ರೇಟಿಂಗ್ ಪಡೆದಿರುವುದು ಡಿ. ಗುಕೇಶ್ ಎಂಬುವುದು ವಿಶೇಷವಾಗಿದೆ. ಗುಕೇಶ್ 2777 ರೇಟಿಂಗ್ ಪಡೆದರೆ, ಆರ್. ಪ್ರಜ್ಞಾನಂದ 2741 ರೇಟಿಂಗ್ ಪಡೆದಿದ್ದಾರೆ.