ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಳೆದೊಂದು ವರ್ಷದಿಂದ ಕೈಗೆತ್ತಿಕೊಂಡಿರುವ ಶಿಕ್ಷಣ, ಆರೋಗ್ಯ, ಉದ್ಯೋಗ, ಕೌಶಲ್ಯ, ಹಿಂದುದುಳಿದ ವರ್ಗಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಸೇರಿದಂತೆ ಹಲವು ರಂಗದಲ್ಲಿ ಕೈಗೆತ್ತಕೊಂಡಿರುವ ವಿನೂತನ ಯೋಜನೆಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಧರಂಸಿಂಗ್ ಹೇಳಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು, ಕೆಕೆಆರ್‌ಡಿಬಿ 2025- 26 ನೇ ಸಾಲಿನ 5 ಸಾವಿರ ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ಕೋರಿ ರಾಜ್ಯ ಯೋಜನಾ ಖಾತೆ ಸಚಿವ ಡಿ. ಸುದಾಕರ್ ಜೊತೆಗೂಡಿಕೊಂಡು ಪ್ರಸ್ತಾವನೆ ಸಲ್ಲಿಸಿದ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಅವರಿಗೆ ಮಂಡಳಿ ಹಲವು ರಂಗಗಳಲ್ಲಿ ಕೈಗೆತ್ತಿಕೊಂಡಿರುವ ನೂತನ ಯೋಜನೆಗಳ ಬಗ್ಗೆ ವಿವರಿಸಲಾಯಿತು ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ರಾಜ್ಯಪಾಲರು ರಾಜ್ಯದ ವಿವಿಗಳ ಕುಲಾಧಿಪತಿಗಳು, ಹೀಗಾಗಿ ಕಲ್ಯಾಣ ಕರ್ಟಾಕದಲ್ಲಿ ಬರುವ ಉನ್ನತ ಶಿಕ್ಷಣ ಸಂಸ್ಥೆಗಳಾದ ವಿಶ್ವ ವಿದ್ಯಾಲಯಗಳಿಗೂ ಮಂಡಳಿಯ ಅನುದಾನದ ಹಂಚಿಕೆಯಲ್ಲಿ ಪರಿಗಣಿಸುವಂತೆ ಅಮೂಲ್ಯ ಸಲಹೆ ನೀಡಿದ್ದಾರೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿ ಶಿಕ್ಷಣ , ಆರೋಗ್ಯ ರಂಗದಲ್ಲಿನ ಯೋಜನೆಗಳನ್ನು ರಾಜ್ಯಪಾಲರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಉನ್ನತ ಶಿಕ್ಷಣ ರಂಗದ ಕೇಂದ್ರವಾದ ವಿಶ್ವ ವಿದ್ಯಾಲಯಗಳಿಗೂ ಅನುದಾನ ನೀಡುವಲ್ಲಿ ಪರಿಗಣನೆಗೆ ತೆಗೆದುಕೊಳ್ಳುವಂತೆ ರಾಜ್ಯಪಾಲರು ಸಲಹೆ ನೀಡಿದ್ದಾರೆಂದು ಡಾ. ಅಜಯ್ ಧರಂಸಿಂಗ್ ಹೇಳಿದ್ದಾರೆ.