ಬೆಂಗಳೂರು: ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್ ಟೆಲ್ ಈಗ ಗೂಗಲ್ ಕಂಪನಿ ಜತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ಗ್ರಾಹಕರಿಗೂ ಭಾರಿ ಅನುಕೂಲವಾಗಲಿದೆ. ಹೌದು, ಗೂಗಲ್ ಹಾಗೂ ಏರ್ ಟೆಲ್ ಸಹಭಾಗಿತ್ವದಲ್ಲಿ ಗ್ರಾಹಕರಿಗೆ ಆರು ತಿಂಗಳವರೆಗೆ 100 ಜಿಬಿ ಗೂಗಲ್ ಒನ್ ಕ್ಲೌಡ್ ಸ್ಟೋರೇಜ್ ಉಚಿತ ಕೊಡುಗೆ ನೀಡುವುದಾಗಿ ಘೋಷಿಸಲಾಗಿದೆ.
ಏರ್ ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರು ಹಾಗೂ ವೈಫೈ ಬಳಕೆದಾರರಿಗೆ ಹೊಸ ಆಫರ್ ಅನ್ವಯವಾಗಲಿದೆ. ಯಾವುದೇ ಶುಲ್ಕವಿಲ್ಲದೆ ಈ ಗ್ರಾಹಕರು ಆರು ತಿಂಗಳವರೆಗೆ ಉಚಿತ ಕ್ಲೌಡ್ ಸ್ಟೋರೇಜ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಗ್ರಾಹಕರು ಫೋಟೋಗಳು, ವೀಡಿಯೋಗಳು, ದಾಖಲೆಗಳು ಸೇರಿ ಯಾವುದೇ ಡೇಟಾವನ್ನು ಗೂಗಲ್ ಕ್ಲೌಡ್ ನಲ್ಲಿ ಸಂಗ್ರಹಿಸಬಹುದಾಗಿದೆ.
6 ತಿಂಗಳ ಬಳಿಕ ಶುಲ್ಕ ಪಾವತಿಸಬೇಕು
ಉಚಿತ ಸೌಲಭ್ಯದ 6 ತಿಂಗಳ ಅವಧಿ ಮುಗಿದ ನಂತರ, ಗ್ರಾಹಕರು ತಿಂಗಳಿಗೆ 125 ರೂಪಾಯಿ ಶುಲ್ಕದೊಂದಿಗೆ ಈ ಸೇವೆಯನ್ನು ಮುಂದುವರಿಸಬಹುದು. ಉಚಿತ ಕೊಡುಗೆ ಬೇಡ, ಶುಲ್ಕ ಪಾವತಿಸುವುದೂ ಬೇಡ ಎಂದರೆ ಗ್ರಾಹಕರು ಅದನ್ನು ತಕ್ಷಣವೇ ಕ್ಲೋಸ್ ಮಾಡುವ ಆಯ್ಕೆಯನ್ನೂ ಪಡೆಯುತ್ತಾರೆ. ನೀವು ಸದಸ್ಯತ್ವವನ್ನು ರದ್ದುಗೊಳಿಸಲು ಬಯಸಿದರೆ, 6 ತಿಂಗಳ ನಂತರ ನೀವು ಸ್ಟೋರೇಜ್ ನ ಎಲ್ಲ ಡೇಟಾವನ್ನು ಡಿಲೀಟ್ ಮಾಡಬೇಕಾಗುತ್ತದೆ.
ಸೌಲಭ್ಯ ಪಡೆಯೋದು ಹೇಗೆ?
- ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.
- ನಿಮ್ಮ ಏರ್ ಟೆಲ್ ಪೋಸ್ಟ್ಪೇಯ್ಡ್ ಅಥವಾ ವೈ-ಫೈ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು.
- ಇದಾದ ನಂತರ ಗೂಗಲ್ ಒನ್ ಸ್ಟೋರೇಜ್ ಆಫರ್ ಸಿಗುತ್ತದೆ. ಅದನ್ನು ಆ್ಯಕ್ಟಿವೇಡ್ ಮಾಡಬೇಕು.
- ಬಳಿಕ ಗೂಗಲ್ ಫೋಟೋಸ್, ಡ್ರೈವ್ ಮತ್ತು ಜಿಮೇಲ್ ನಲ್ಲಿ 100 GB ಸ್ಟೋರೇಜ್ ಬಳಸಲು ಸಾಧ್ಯವಾಗುತ್ತದೆ.