ಪ್ಯಾರಿಸ್ ಒಲಿಂಪಿಕ್ಸ್ ನ ಹಾಕಿ ಟೂರ್ನಿಯಲ್ಲಿ ಭಾರತೀಯ ಆಟಗಾರರು ಎರಡನೇ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ.
ಸೋಮವಾರ ನಡೆದ ಪೂಲ್-B ಪಂದ್ಯದಲ್ಲಿ ಭಾರತ ತಂಡವು ಅರ್ಜೆಂಟೀನಾ ವಿರುದ್ಧ ಡ್ರಾ ಮಾಡಿಕೊಂಡಿದೆ. ಈ ಪಂದ್ಯ ಭಾರೀ ಜಿದ್ದಾಜಿದ್ದಿನಿಂದ ಕೂಡಿತ್ತು. ಆರಂಭದಲ್ಲಿ ಅರ್ಜೆಂಟೀನಾ ಮುನ್ನಡೆ ಪಡೆದಿತ್ತು.
ಮುನ್ಪಡೆ ಆಟಗಾರ ಲ್ಯೂಕಾಸ್ ಮಾರ್ಟಿನೆಝ್ 22ನೇ ನಿಮಿಷದಲ್ಲಿ ಅತ್ಯುತ್ತಮ ಡ್ರಿಬ್ಲಿಂಗ್ನೊಂದಿಗೆ ಗೋಲು ಗಳಿಸಿದ್ದರು. ಈ ಮೂಲಕ ಅರ್ಜೆಂಟೀನಾ ತಂಡಕ್ಕೆ ಮೊದಲ ಯಶಸ್ಸು ನೀಡಿದ್ದರು. ಇದರ ಬೆನ್ನಲ್ಲಿಯೇ ಆಕ್ರಮಣಕಾರಿ ಆಟಕ್ಕೆ ಭಾರತ ಮುಂದಾಯಿತು. ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರೂ ಅರ್ಜೆಂಟೀನಾ ಭಾರತಕ್ಕೆ ತೀವ್ರ ಪ್ರತಿರೋಧ ನೀಡಿತು. ಕೊನೆಯ 2 ನಿಮಿಷಗಳಿರುವಾಗ ಆಕ್ರಮಣಕಾರಿ ಆಟದೊಂದಿಗೆ ನ್ನುಗ್ಗಿದ ಭಾರತೀಯ ಮುನ್ಪಡೆ ಆಟಗಾರರು ಪೆನಾಲ್ಟಿ ಕಾರ್ನರ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. 59ನೇ ನಿಮಿಷದಲ್ಲಿ ಸಿಕ್ಕ ಈ ಅವಕಾಶವನ್ನು ಅದ್ಭುತ ಫ್ಲಿಕ್ ನೊಂದಿಗೆ ಗೋಲಾಗಿ ಪರಿವರ್ತಿಸುವಲ್ಲಿ ನಾಯಕ ಹರ್ಮನ್ಪ್ರೀತ್ ಸಿಂಗ್ ಯಶಸ್ವಿಯಾದರು. ಹೀಗಾಗಿ ಪಂದ್ಯವು ಡ್ರಾನಲ್ಲಿ ಅಂತ್ಯವಾಯಿತು.
ಕೊನೆಯವರೆಗೂ ಸೋಲಿನ ದವಡೆಗೆ ಸಿಲುಕಿದ್ದ ಭಾರತ ತಂಡ ಕೊನೆಯ ನಿಮಿಷದಲ್ಲಿ ಅರ್ಜೆಂಟೀನಾ ಗೆಲುವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ತಂಡವು ಪೂಲ್-ಬಿ ಅಂಕ ಪಟ್ಟಿಯಲ್ಲಿ 4 ಪಾಯಿಂಟ್ಸ್ ಗಳೊಂದಿಗೆ 3ನೇ ಸ್ಥಾನದಲ್ಲಿದೆ.
ಪೂಲ್-ಬಿ ನಲ್ಲಿ ಮಂಗಳವಾರ ಭಾರತ ತಂಡವು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.45 ರಿಂದ ಆರಂಭವಾಗಲಿದೆ. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಐರ್ಲೆಂಡ್ ತಂಡಕ್ಕೆ ಈ ಪಂದ್ಯ ನಿರ್ಣಾಯಕವಾಗಿದೆ. ಭಾರತ ತಂಡ ಈ ಪಂದ್ಯ ಗೆದ್ದರೆ 2ನೇ ಸ್ಥಾನಕ್ಕೆ ತಲುಪಲಿದೆ.