ಮೆಟ್ರೋ ಪ್ರಯಾಣ ಬೆಂಗಳೂರಿಗರಿಗೆ ಸುಲಭ ಪ್ರಯಾಣ. ಆದರೆ, ಒಂದೇ ಒಂದು ಬೇಜಾರಿನ ವಿಷಯ ಏನಪ್ಪ ಅಂದ್ರೆ, ಮೆಟ್ರೋ ಪ್ರಯಾಣಿಕರಿಗೆ ನೆಟ್ ವರ್ಕ್ ಕಿರಿಕಿರಿ ಇರುತ್ತದೆ. ಹೀಗಾಗಿ ಪ್ರಯಾಣಿಕರು ನೆಟ್ ವರ್ಕ್ ಬಗ್ಗೆ ಗೊಣಗುತ್ತಿದ್ದರು. ಸದ್ಯ ಇದಕ್ಕೆಲ್ಲ ಮುಕ್ತಿ ಸಿಕ್ಕಂತಾಗಿದೆ.
ಮೆಟ್ರೋ ಮಾರ್ಗದಲ್ಲಿ ಉಂಟಾಗುವ ನೆಟ್ವರ್ಕ್ ಸಮಸ್ಯೆ ದೊಡ್ಡ ಸಮಸ್ಯೆ. ಈ ಸಮಸ್ಯೆ ನಿವಾರಣೆಗೆ BMRCL, ಮೆಟ್ರೋ ನಿಲ್ದಾಣಗಳಲ್ಲಿ IBS, BTS ಸೆಲ್ಯೂಲಾರ್ ಟವರ್ ಮತ್ತು ಪೋಲ್ ಗಳನ್ನು ಇಟ್ಟು ವೈಫೈ ಮೂಲಕ ಗ್ರಾಹಕರಿಗೆ 4ಜಿ, 5ಜಿ ಸೇವೆ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.
ನಮ್ಮ ಮೆಟ್ರೋ 2ನೇ ಹಂತದ ಸುರಂಗ ಹಾಗೂ ಎತ್ತರಿಸಿದ ಮಾರ್ಗದಲ್ಲಿ ನಿರಂತರ ಮತ್ತು ಸುಗಮ ಮೊಬೈಲ್ ಸಂಪರ್ಕವನ್ನು ಒದಗಿಸಲು ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಕಂಪನಿ ಸಂಸ್ಥೆಯೊಂದಿಗೆ ಬಾಡಿಗೆ ಕಾಂಟ್ರ್ಯಾಕ್ಟ್ಗೆ ಸಹಿ ಹಾಕಿದೆ. ಇದರಿಂದ ಸದ್ಯ ಮೆಟ್ರೋ ಮಾರ್ಗದ ಅಲ್ಲಲ್ಲಿ ಪ್ರಯಾಣಿಕರಿಗೆ ಉಂಟಾಗುತ್ತಿರುವ ನೆಟ್ವರ್ಕ್ ಸಮಸ್ಯೆ ತಪ್ಪಲಿದೆ. ಜತೆಗೆ ವಿಶೇಷವಾಗಿ ಭೂಗತ ಮಾರ್ಗವಿರುವ 13.76 ಕಿಮೀನ ಡೈರಿ ವೃತ್ತದಿಂದ ನಾಗವಾರದವರೆಗೆ ಸುಮಾರು 12 ನಿಲ್ದಾಣಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಆದಂತಾಗುತ್ತದೆ.



















