ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಏಳೂವರೆ ಕೋಟಿಗಿಂತ ಅಧಿಕ ಸದಸ್ಯರಿಗೆ ಸಿಹಿ ಸುದ್ದಿ ದೊರೆತಿದೆ. ಇಪಿಎಫ್ಒದ ಹಲವು ಸೇವೆಗಳು ಈಗ ಡಿಜಿಲಾಕರ್ (DigiLocker) ನಲ್ಲೂ ಲಭ್ಯವಾಗಿವೆ. ಇದರಿಂದಾಗಿ, ಪಿಎಫ್ ಸದಸ್ಯರು ತಮ್ಮ ಖಾತೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಡಿಜಿಲಾಕರ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಇಪಿಎಫ್ ಮಾಹಿತಿಯೂ ಈಗ ಡಿಜಿಟಲೈಸ್ ಆದಂತಾಗಿದೆ.
ಇಪಿಎಫ್ಒ ಸದಸ್ಯರು ಇನ್ನುಮುಂದೆ ಡಿಜಿಲಾಕರ್ ಮೂಲಕ ಯುಎಎನ್ ಕಾರ್ಡ್, ಪೆನ್ಶನ್ ಪೇಮೆಂಟ್ ಆರ್ಡರ್, ಸ್ಕೀಮ್ ಸರ್ಟಿಫಿಕೇಟ್ ಸೇರಿ ಹಲವು ದಾಖಲೆಗಳನ್ನು ಡಿಜಿಲಾಕರ್ ಮೂಲಕವೇ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು, ಈಗ ಇಪಿಎಫ್ ದಾಖಲೆಗಳೂ ಸುಲಭವಾಗಿ ಕೈಸೇರಲಿವೆ.
ಏನಿದು ಡಿಜಿಲಾಕರ್?
ಕೇಂದ್ರ ಸರ್ಕಾರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಡಿಜಿಲಾಕರ್ಅನ್ನು ಜನರಿಗೆ ಪರಿಚಯಿಸಿದೆ. ನಮ್ಮ ಬೆಲೆಬಾಳುವ ವಸ್ತುಗಳು, ದುಡ್ಡು, ಬಂಗಾರ, ದಾಖಲೆ ಪತ್ರಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಸುರಕ್ಷಿತವಾಗಿಡುತ್ತೇವೆಯೋ, ಹಾಗೆಯೇ, ನಮ್ಮ ಇ-ದಾಖಲೆಪತ್ರಗಳನ್ನು ಡಿಜಿ ಲಾಕರ್ನಲ್ಲಿ ಸುರಕ್ಷಿತವಾಗಿ ಇಡಬಹುದು. ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿ ಹತ್ತಾರು ದಾಖಲೆಗಳನ್ನು ಡಿಜಿಲಾಕರ್ ನಲ್ಲಿ ಇರಿಸಬಹುದು. ಈ ದಾಖಲೆಗಳು ಮಾನ್ಯ ಎಂದು ಸರ್ಕಾರವೇ ತಿಳಿಸಿದೆ.
ದೇಶದ ನಾಗರಿಕರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್, ಡಿಗ್ರಿ ಸರ್ಟಿಫಿಕೇಟ್, ದಾಖಲೆ ಪತ್ರ ಮೊದಲಾದವುಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಲಾಕರ್ ನಲ್ಲಿ ಅಪ್ ಲೋಡ್ ಮಾಡಬಹುದಾಗಿದೆ. ಡಿಜಿಟಲ್ ಲಾಕರ್ ನಲ್ಲಿ ನಮ್ಮ ದಾಖಲೆ ಪತ್ರಗಳು ಸುರಕ್ಷಿತವಾಗಿರುತ್ತವೆ. ಕ್ಲೌಡ್ ಸರ್ವರ್ ತಂತ್ರಜ್ಞಾನದ ಮೂಲಕ ಈ ದಾಖಲೆಗಳೆಲ್ಲಾ ಇಲ್ಲಿ ಸೇವ್ ಆಗಿದ್ದು, ಅಗತ್ಯ ಬಂದಾಗ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.