ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಮಾಡಿರುವುದು ದೃಢಪಟ್ಟಿದ್ದು, ಬರೋಬ್ಬರಿ 102.55 ಕೋಟಿ ರೂ. ದಂಡ ಪಾವತಿಸುವಂತೆ ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ)ನೋಟಿಸ್ ಜಾರಿ ಮಾಡಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ 2024ರ ಮಾರ್ಚ್ 4ರಂದು ಡಿಆರ್ ಐ ಅಧಿಕಾರಿಗಳು, ರನ್ಯಾರಾವ್ ರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಆ ವೇಳೆ 14.8 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ಜೈಲಿನಲ್ಲಿದ್ದಾರೆ. ಇಂದು ಜೈಲಿಗೆ ತೆರಳಿರುವ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ರನ್ಯಾರಾವ್ ಬರೋಬ್ಬರಿ 127.3 ಕೆ.ಜಿ ಚಿನ್ನ ಸಾಗಾಟ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿತರ ಮೂವರು ಆರೋಪಿಗಳಿಗೂ ನೋಟಿಸ್ ನೀಡಲಾಗಿದೆ.
ಪ್ರಕರಣದ ಎರಡನೇ ಆರೋಪಿ ತರುಣ್ ಕೊಂಡುರು ರಾಜು 67.6 ಕೆ.ಜಿ ಚಿನ್ನ ಕಳ್ಳ ಸಾಗಾಟ ಮಾಡಿರುವುದು ದೃಢಪಟ್ಟಿದ್ದು, ರಾಜುಗೆ 62 ಕೋಟಿ ರೂ. ದಂಡ ವಿಧಿಸಲಾಗಿದೆ. ಸಾಹಿಲ್ ಜೈನ್ ಮತ್ತು ಭರತ್ ಜೈನ್ ತಲಾ 63.61 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಿರುವುದು ಧೃಡಪಟ್ಟಿದೆ. ಹೀಗಾಗಿ, ಭರತ್ ಜೈನ್ ಹಾಗೂ ಸಾಹಿಲ್ ಜೈನ್ ತಲಾ 53 ಕೋಟಿ ರೂ. ದಂಡ ಪಾವತಿಸಲು ನೋಟಿಸ್ ನೀಡಲಾಗಿದೆ. ರನ್ಯಾರಾವ್ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ ಅಡಿ ಒಂದು ವರ್ಷ ಜೈಲು ಶಿಕ್ಷೆಯಾಗಿದ್ದು, ಜಾಮೀನು ಪಡೆಯುವ ಅವಕಾಶ ಇಲ್ಲದಂತಾಗಿದೆ.
ಅಧಿಕಾರಿಗಳು 6 ತಿಂಗಳಲ್ಲಿ ದಂಡ ವಸೂಲಿ ಮಾಡಬೇಕಿದೆ. ಒಂದು ವೇಳೆ ನಿಯಮಾನುಸಾರ ದಂಡ ಪಾವತಿಸದಿದ್ದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಅಧಿಕಾರಿಗಳಿಗೆ ಇದೆ.