ಬಳ್ಳಾರಿ: ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 4 ಕೆಜಿ ಚಿನ್ನ ಕಳುವಾದ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಕೇರಳ ಎಸ್‌ಐಟಿ ತಂಡವು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಅಂಗಡಿ ಮತ್ತು ಚಿನ್ನ ಮಾರಾಟ ಮಾಡಿದ ಪೋಟಿ ಉನ್ನಿಕೃಷ್ಣನ್ ಮನೆಯ ಮೇಲೆ ಶುಕ್ರವಾರ ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಶಬರಿಮಲೆಯಲ್ಲಿ ಕಳ್ಳತನ ಆದ ಚಿನ್ನ ಎನ್ನುವುದು ಗೊತ್ತಿರದ ಕಾರಣ ನಾನು ಚಿನ್ನ ಖರೀದಿ ಮಾಡಿದ್ದೆ.ಕದ್ದಿದ್ದ ಚಿನ್ನ ಎಂದು ಗೊತ್ತಿದ್ದರೆ ಖರೀದಿ ಮಾಡುತ್ತಿರಲಿಲ್ಲ ಎಂದು ಗೋವರ್ಧನ್ ಕೇರಳದ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾನೆ. ಇದನ್ನು ಕೇಳಿದ ಅಧಿಕಾರಿಗಳು ಮುಂದೇನಾದರೂ ಅಗತ್ಯವಿದ್ದರೆ ತನಿಖೆಗೆ ಕರೆದಾಗ ಬರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಮಾಜಿ ಅಧಿಕಾರಿ ಬಿ. ಮುರಾರಿ ಬಾಬು ಅವರನ್ನು ಎಸ್‌ಐಟಿ ಬಂಧಿಸಿತ್ತು. ಶಬರಿಮಲೆ ದೇವಸ್ಥಾನದ ಚಿನ್ನದ ದುರುಪಯೋಗ ಮತ್ತು ಉನ್ನಿಕೃಷ್ಣನ್ ಪೊಟ್ಟಿಗೆ ಸಂಬಂಧಿಸಿದ ಚಿನ್ನ ಲೇಪಿಸುವ ಕೆಲಸಗಳಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು ಇದೀಗ ಮತ್ತೊಮ್ಮೆ ಶ್ರೀರಾಮ್‌ಪುರ ಪೊಲೀಸರ ಸಹಕಾರದಿಂದ ಆರೋಪಿ ಪೋಟಿ ಉನ್ನಿಕೃಷ್ಣನ್ ನಿವಾಸದ ಮೇಲೆ ನಿನ್ನೆ(ಅ.24) ದಾಳಿ ನಡೆಸಿದ ಎಸ್ಐಟಿ ಅಧಿಕಾರಿಗಳು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.



















