ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಯುದ್ಧವು ಜಾಗತಿಕ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದೆ. ವಿವಿಧ ದೇಶಗಳ ಮೇಲೆ ಟ್ರಂಪ್ ವಿಧಿಸಿರುವ ಹೊಸ ಸುಂಕಗಳು ಜಾರಿಯಾಗುತ್ತಲೇ ಜಾಗತಿಕ ಷೇರು ಮಾರುಕಟ್ಟೆಗಳು(Stock market) ನೆಲಕಚ್ಚಿವೆ. ವಿಶ್ವ ಮಾರುಕಟ್ಟೆಗಳ ಲಕ್ಷಕೋಟಿಗಟ್ಟಲೆ ಬಂಡವಾಳಗಳು ಕೊಚ್ಚಿ ಹೋಗಿದ್ದು, ಭಾರತದ ಷೇರು ಮಾರುಕಟ್ಟೆಯೂ ಈ ಸುನಾಮಿಯಡಿ ಸಿಲುಕಿ ನಲುಗಲಾರಂಭಿಸಿದೆ.
ಸುಮಾರು ಒಂದು ವರ್ಷದ ಬಳಿಕ ಮುಂಬೈ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಸೋಮವಾರ ಅತ್ಯಂತ ಕರಾಳ ದಿನವಾಗಿ ಮಾರ್ಪಾಡಾಗಿದೆ. ಸೋಮವಾರ ಷೇರುಪೇಟೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್ 3,000 ಪಾಯಿಂಟ್ ಗಳಿಗಿಂತಲೂ ಹೆಚ್ಚು ಕುಸಿತ ಕಂಡರೆ, ನಿಫ್ಟಿ ಶೇ.5ರ|ಟು ಕುಸಿತ ದಾಖಲಿಸಿದೆ. ವಿಶ್ವದ ಎಲ್ಲ ಷೇರು ಮಾರುಕಟ್ಟೆಗಳೂ ಇದೇ ಪರಿಸ್ಥಿತಿಯನ್ನು ಅನುಭವಿಸಿವೆ.

ಕೊಚ್ಚಿ ಹೋಯ್ತು 19 ಲಕ್ಷ ಕೋಟಿ ರೂ.!
ಬೆಳಗ್ಗಿನಿಂದಲೇ ಮಾರುಕಟ್ಟೆ ಕುಸಿತದ ಹಾದಿಗೆ ಸಾಗಿದ ಪರಿಣಾಮ, ಬಿಎಸ್ಇಯ ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ 19 ಲಕ್ಷ ಕೋಟಿ ರೂ. ನಷ್ಟವಾಗಿದೆ. ಪ್ರತಿಯೊಂದು ವಲಯವೂ ಕುಸಿತ ಕಂಡಿದ್ದೇ ಇದಕ್ಕೆ ಕಾರಣ.
ನಿಫ್ಟಿ ಮೆಟಲ್ ಸೂಚ್ಯಂಕವು ಶೇಕಡಾ 8 ರಷ್ಟು ಕುಸಿದರೆ, ಐಟಿ ಷೇರುಗಳು ಶೇಕಡಾ 7 ಕ್ಕಿಂತ ಹೆಚ್ಚು ಕುಸಿದಿವೆ. ಆಟೋ ಕ್ಷೇತ್ರ, ರಿಯಲ್ ಎಸ್ಟೇಟ್, ತೈಲ ಮತ್ತು ಅನಿಲ ವಲಯದ ಷೇರುಗಳು ತಲಾ 5% ಕ್ಕಿಂತ ಹೆಚ್ಚು ಕುಸಿದಿವೆ.
“ಇವೆಲ್ಲವೂ ಮಾರುಕಟ್ಟೆಯಲ್ಲಿನ ಅನಿರೀಕ್ಷಿತ ಬೆಳವಣಿಗೆಗಳಾಗಿವೆ. ಏಷ್ಯಾ ಪೆಸಿಫಿಕ್, ಜಪಾನ್, ಹಾಂಗ್ ಕಾಂಗ್ ಮಾರುಕಟ್ಟೆಗಳಲ್ಲೂ ಇದೇ ಸ್ಥಿತಿ ಇದೆ. ಹೂಡಿಕೆದಾರರೆಲ್ಲರೂ ಷೇರುಗಳ ಮಾರಾಟದಲ್ಲಿ ತೊಡಗಿದ್ದಾರೆ. ಇಂಥ ಸ್ಥಿತಿಯನ್ನು ಯಾರೂ ಎದುರು ನೋಡಿರಲಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಬೇರೆ ದಾರಿಯೂ ಇಲ್ಲ ” ಎಂದು ವೆಲ್ತ್ ಮಿಲ್ಸ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ನ ಈಕ್ವಿಟಿ ಸ್ಟ್ರಾಟಜಿ ನಿರ್ದೇಶಕ ಕ್ರಾಂತಿ ಬಾತಿನಿ ಹೇಳಿದ್ದಾರೆ.
10 ತಿಂಗಳ ಕನಿಷ್ಠ ಮಟ್ಟಕ್ಕೆ ಷೇರುಪೇಟೆ
ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಕಳೆದ 10 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಇದು ಹೂಡಿಕೆದಾರರಿಗೆ ಭಾರೀ ನಷ್ಟವನ್ನು ತಂದೊಡ್ಡಿದೆ. ಸೋಮವಾರ ಬೆಳಿಗ್ಗೆ 9:16 ರ ಸುಮಾರಿಗೆ ಬಿಎಸ್ಇ ಸೆನ್ಸೆಕ್ಸ್ 3,072 ಪಾಯಿಂಟ್ಸ್ ಅಥವಾ 4.09% ಕುಸಿದು 72,296ಕ್ಕೆ ತಲುಪಿತು. ನಿಫ್ಟಿ ಕೂಡ 1,146 ಪಾಯಿಂಟ್ಸ್ ಅಥವಾ 5% ಕುಸಿದು 21,758ಕ್ಕೆ ತಲುಪಿತು. ಇದು ಜಾಗತಿಕ ಆರ್ಥಿಕ ಕುಸಿತದ ಸುಳಿವು ಎಂಬ ಭಾವನೆಯೇ ಹೂಡಿಕೆದಾರರ ಭೀತಿಗೆ ಕಾರಣವಾಯಿತು ಎನ್ನಲಾಗಿದೆ.
ಕಾರಣವೇನು?
ಟ್ರಂಪ್ ಅವರು ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ 10% ರಿಂದ 50% ವರೆಗೆ ಪ್ರತಿ ಸುಂಕ ಘೋಷಿಸಿದ್ದೇ ಮಾರುಕಟ್ಟೆಗಳು ಅಲ್ಲೋಲಕಲ್ಲೋಲವಾಗಲು ಕಾರಣ. ಜಪಾನ್‌ನ ನಿಕ್ಕಿ ಷೇರುಪೇಟೆ ಸೂಚ್ಯಂಕ ಶೇ.7, ದಕ್ಷಿಣ ಕೊರಿಯಾದ ಕೋಸ್ಪಿ ಶೇ.5 ಮತ್ತು ಚೀನಾದ ಬ್ಲೂ ಚಿಪ್ ಸೂಚ್ಯಂಕ ಶೇ.7ರಷ್ಟು ಕುಸಿತ ಕಂಡಿವೆ. ಹಾಂಕಾಂಗ್‌ನ ಹಾಂಗ್ ಸೆಂಗ್ ಸೂಚ್ಯಂಕ ಶೇ.10.5 ರಷ್ಟು ಕುಸಿತ ಕಂಡಿದೆ. ಪಶ್ಚಿಮದಲ್ಲಿ, ನಾಸ್ಡಾಕ್ ಫ್ಯೂಚರ್ಸ್ 4% ಮತ್ತು ಎಸ್ &ಪಿ 500 ಫ್ಯೂಚರ್ಸ್ 3.1% ನಷ್ಟು ಕುಸಿದಿದೆ. ಯುರೋಪಿಯನ್ ಮಾರುಕಟ್ಟೆಗಳು ಸಹ ತೀವ್ರ ಕುಸಿತಕ್ಕೆ ಸಜ್ಜಾಗಿವೆ.
ಜಾಗತಿಕ ಆರ್ಥಿಕ ಹಿಂಜರಿತದ ಭೀತಿ
ಮಾರುಕಟ್ಟೆಗಳಿಗೆ ಈಗ ಸಂಭಾವ್ಯ ಆರ್ಥಿಕ ಹಿಂಜರಿತದ ಭೀತಿ ಆರಂಭವಾಗಿದೆ. ಕೋವಿಡ್ ಬಳಿಕ ಮಾರುಕಟ್ಟೆಗಳು ಈ ರೀತಿಯ ದೊಡ್ಡ ಮಟ್ಟದ ಆಘಾತ ಎದುರಿಸಿದ್ದು ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ. ಟ್ರಂಪ್ ಅವರ ನಡೆಯು ವಿಶ್ವಾದ್ಯಂತ ಪೂರ್ಣ ಪ್ರಮಾಣದ ಆರ್ಥಿಕ ಹಿಂಜರಿತವನ್ನು ಉಂಟು ಮಾಡಲಿದೆಯೇ ಎಂಬ ಆತಂಕ ಮನೆಮಾಡಿದೆ.