ವಾಷಿಂಗ್ಟನ್/ಲಂಡನ್: ಇರಾನ್ ಮೇಲೆ ಸಾರಿರುವ ಯುದ್ಧ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಯನ್ನು ವಿರೋಧಿಸಿ ಅಮೆರಿಕ ಮತ್ತು ಯುರೋಪ್‌ನಾದ್ಯಂತ ಬೃಹತ್ ‘ನೋ ಕಿಂಗ್ಸ್’ (ನಮಗೆ ರಾಜರು ಬೇಡ) ಪ್ರತಿಭಟನಾ ರಾಲಿಗಳು ನಡೆದಿವೆ. ಅಮೆರಿಕದ ಎಲ್ಲಾ 50 ರಾಜ್ಯಗಳು ಸೇರಿದಂತೆ ವಿಶ್ವದ ಪ್ರಮುಖ ನಗರಗಳಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಟ್ರಂಪ್ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಿನ್ನೆಸೋಟಾ ರಾಜ್ಯವು ಈ ಬಾರಿಯ ಪ್ರತಿಭಟನೆಯ ಕೇಂದ್ರಬಿಂದುವಾಗಿತ್ತು. ಅಮೆರಿಕದ ಫೆಡರಲ್ ಏಜೆಂಟ್‌ಗಳಿಂದ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ ಘಟನೆಯನ್ನು ಖಂಡಿಸಿ ಸಾವಿರಾರು ಜನರು ಸೇಂಟ್ ಪಾಲ್‌ನಲ್ಲಿರುವ ಕ್ಯಾಪಿಟಲ್ ಲಾನ್‌ನಲ್ಲಿ ಜಮಾಯಿಸಿದ್ದರು. ಖ್ಯಾತ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರು “ಸ್ಟ್ರೀಟ್ಸ್ ಆಫ್ ಮಿನಿಯಾಪೊಲಿಸ್” ಹಾಡನ್ನು ಹಾಡುವ ಮೂಲಕ ಪ್ರತಿಭಟನಾಕಾರರಲ್ಲಿ ಸ್ಫೂರ್ತಿ ತುಂಬಿದರು. “ಅಮೆರಿಕದ ನಗರಗಳ ಮೇಲಿನ ಈ ಆಕ್ರಮಣ ಮತ್ತು ಸರ್ವಾಧಿಕಾರಿ ಧೋರಣೆಯನ್ನು ನಾವು ಸಹಿಸುವುದಿಲ್ಲ” ಎಂದು ಅವರು ಗುಡುಗಿದರು. ಹಾಲಿವುಡ್ ನಟ ರಾಬರ್ಟ್ ಡಿ ನಿರೋ ಕೂಡ ವಿಡಿಯೋ ಸಂದೇಶದ ಮೂಲಕ ಬೆಂಬಲ ಸೂಚಿಸಿದರು.

ಅಮೆರಿಕದ ಮೂಲೆ ಮೂಲೆಯಲ್ಲೂ ಮೊಳಗಿದ ಘೋಷಣೆ
ನ್ಯೂಯಾರ್ಕ್‌ನಂತಹ ದೊಡ್ಡ ನಗರಗಳಲ್ಲದೆ, ಟ್ರಂಪ್ ಅವರ ಭದ್ರಕೋಟೆ ಎನಿಸಿದ ಇದಾಹೊ ಮತ್ತು ಕಾನ್ಸಾಸ್‌ನಂತಹ ಸಣ್ಣ ಪಟ್ಟಣಗಳಲ್ಲೂ ಜನರು ಬೀದಿಗಿಳಿದಿದ್ದರು. ವಾಷಿಂಗ್ಟನ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು “ನಮಗೆ ಬೇಕಾಗಿರುವುದು ಪ್ರಜಾಪ್ರಭುತ್ವವೇ ಹೊರತು ರಾಜಪ್ರಭುತ್ವವಲ್ಲ” ಎಂಬ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಇರಾನ್ ಮೇಲಿನ ಯುದ್ಧ, ತೃತೀಯ ಲಿಂಗಿಗಳ ಹಕ್ಕುಗಳ ದಮನ ಮತ್ತು ಕಠಿಣ ವಲಸೆ ಕಾನೂನುಗಳ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕಿದರು.
ವಿಶ್ವಾದ್ಯಂತ ವ್ಯಾಪಿಸಿದ ಪ್ರತಿಭಟನೆ
ಈ ಚಳವಳಿ ಕೇವಲ ಅಮೆರಿಕಕ್ಕೆ ಸೀಮಿತವಾಗದೆ ಲಂಡನ್, ಪ್ಯಾರಿಸ್ ಮತ್ತು ರೋಮ್‌ಗೂ ವ್ಯಾಪಿಸಿದೆ. ರೋಮ್‌ನಲ್ಲಿ ಸಾವಿರಾರು ಜನರು ಜಮಾಯಿಸಿ ಇಟಲಿ ಸರ್ಕಾರದ ನೀತಿಗಳ ಜೊತೆಗೆ ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧದಾಹವನ್ನು ಖಂಡಿಸಿದರು. ಲಂಡನ್‌ನಲ್ಲಿ “ವರ್ಣಭೇದ ನೀತಿಯನ್ನು ನಿಲ್ಲಿಸಿ” ಎಂದೂ, ಇರಾನ್ ಯುದ್ಧ ಕೊನೆಗೊಳಿಸಿ ಎಂದೂ ಘೋಷಣೆಗಳು ಮೊಳಗಿದವು. ಪ್ಯಾರಿಸ್‌ನಲ್ಲಿ ನೆಲೆಸಿರುವ ಅಮೆರಿಕನ್ನರು ಒಗ್ಗೂಡಿ ಟ್ರಂಪ್ ಅವರ “ಅನೈತಿಕ ಮತ್ತು ಅಪಾಯಕಾರಿ” ಯುದ್ಧದ ನಿರ್ಧಾರಗಳನ್ನು ಪ್ರಶ್ನಿಸಿದರು.
ಈ ಬೃಹತ್ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ವಕ್ತಾರ ಅಬಿಗೈಲ್ ಜಾಕ್ಸನ್, “ಇವು ಎಡಪಂಥೀಯ ನಿಧಿಗಳಿಂದ ಪ್ರಾಯೋಜಿತವಾದ ಕಾರ್ಯಕ್ರಮಗಳಾಗಿದ್ದು, ಇವುಗಳಿಗೆ ಸಾರ್ವಜನಿಕ ಬೆಂಬಲವಿಲ್ಲ” ಎಂದಿದ್ದಾರೆ. ಇವು ಕೇವಲ ‘ಟ್ರಂಪ್ ವಿರೋಧಿ ಮಾನಸಿಕ ಚಿಕಿತ್ಸಾ ಸೆಷನ್‌ಗಳು’ ಎಂದು ಅವರು ಲೇವಡಿ ಮಾಡಿದ್ದಾರೆ. ಆದರೆ, ಆಯೋಜಕರು ಮಾತ್ರ ಇದು ಜನರ ನಿಜವಾದ ಆಕ್ರೋಶದ ಪ್ರತಿಬಿಂಬವಾಗಿದ್ದು, ಸರ್ವಾಧಿಕಾರಿ ಧೋರಣೆಯ ವಿರುದ್ಧದ ಕ್ರಾಂತಿ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಇರಾನ್ ಮೇಲೆ ಭೂಸೇನೆ ದಾಳಿ ಭೀತಿ : ಹೊರ್ಮುಜ್ ಜಲಸಂಧಿ ವಶಕ್ಕೆ ಅಮೆರಿಕ ಸಜ್ಜು!



















