ಭಾರತ ವನಿತೆಯರ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ (Shreyanka Patil) ಮಹಿಳಾ ಏಷ್ಯಾಕಪ್ 2024 ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶ್ರೇಯಾಂಕಾ ಪಾಟೀಲ್ ಬೆರಳಿನ ಮೂಳೆ ಮುರಿತದಿಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದಾರೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯಲ್ಲಿ ಹೇಳಿದೆ. ಶ್ರೇಯಾಂಕಾ ಪಾಟೀಲ್ ಪಾಕಿಸ್ತಾನ್ ವಿರುದ್ಧ ನಡೆದಿದ್ದ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರು. ಆ ವೇಳೆ 3.4 ಓವರ್ ಬೌಲಿಂಗ್ ಮಾಡಿ 14 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು. ಆದರೆ, ಇದೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಗಾಯಗೊಂಡಿದ್ದರು. ಆಕೆಯ ಎಡಗೈಯ ನಾಲ್ಕನೇ ಬೆರಳಿಗೆ ಮುರಿತವಾಗಿದ್ದು, ಹೀಗಾಗಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಶ್ರೇಯಾಂಕಾ ಪಾಟೀಲ್ ಏಷ್ಯಾಕಪ್ ನಿಂದ ಹೊರಬೀಳುತ್ತಿದ್ದಂತೆ ಬದಲಿ ಆಟಗಾರ್ತಿಯಾಗಿ ತನುಜಾ ಕನ್ವರ್ ಆಯ್ಕೆಯಾಗಿದ್ದಾರೆ. 26 ವರ್ಷದ ತುನುಜಾಗೆ ಇದು ಚೊಚ್ಚಲ ಅವಕಾಶವಾಗಿದೆ. ಭಾರತವು ಭಾನುವಾರ ಏಷ್ಯಾ ಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧ ಸೆಣಸಾಟ ನಡೆಸಲಿದೆ. ತಾನಾಡಿದ ಮೊದಲ ಪಂದ್ಯವನ್ನು ಬದ್ಧ ವೈರಿ ಪಾಕ್ ವಿರುದ್ಧ ಭಾರತದ ವನಿತೆಯರು ಗೆದ್ದು ಬೀಗಿದ್ದಾರೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದೆ. ದಂಬುಲ್ಲಾದ ರಂಗಿರಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 19.2 ಓವರ್ ಗಳಲ್ಲಿ 108 ರನ್ ಗಳಿಸಿ ಆಲೌಟ್ ಆಗಿದ್ದರು. ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 14.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 109 ರನ್ ಬಾರಿಸಿ ಗೆಲುವು ಸಾಧಿಸಿದೆ.
ಹೀಗಾಗಿ ಇಂದು ಟೀಮ್ ಇಂಡಿಯಾ 2ನೇ ಪಂದ್ಯಕ್ಕಾಗಿ ಸಜ್ಜಾಗಿದೆ. ಭಾನುವಾರ (ಜು.21) ನಡೆಯಲಿರುವ ಏಷ್ಯಾಕಪ್ನ 5ನೇ ಪಂದ್ಯದಲ್ಲಿ ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದರೆ, ಏಷ್ಯಾಕಪ್ 2024ರ ಫೈನಲ್ ಪ್ರವೇಶಿಸುವುದು ನಿಶ್ಚಿತವಾಗಲಿದೆ.
