ಟೆಲ್ ಅವಿವ್ : ಹಮಾಸ್ ದಾಳಿಯಲ್ಲಿ ತನ್ನ ಕಣ್ಣೆದುರೇ ಪ್ರೇಯಸಿಯನ್ನು ಕಳೆದುಕೊಂಡಿದ್ದ ಇಸ್ರೇಲಿ ಯುವಕನೊಬ್ಬ, ಎರಡು ವರ್ಷಗಳ ಮಾನಸಿಕ ನೋವಿನ ನಂತರ ಈಗ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಕ್ಟೋಬರ್ 2023ರಲ್ಲಿ ನೋವಾ ಸಂಗೀತ ಉತ್ಸವದ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯ ವೇಳೆ ಬದುಕುಳಿದಿದ್ದ ಈ ಯುವಕ, ದುರಂತದ ಎರಡನೇ ವಾರ್ಷಿಕೋತ್ಸವದ ಕೆಲವೇ ದಿನಗಳ ನಂತರ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾನೆ.

ಆತ್ಮಹತ್ಯೆಗೂ ಮುನ್ನ ಕಣ್ಣೀರ ಮಾತು : 30 ವರ್ಷದ ರೋಯಿ ಶಲೆವ್, ಅಕ್ಟೋಬರ್ 2023ರಲ್ಲಿ ನಡೆದ ನೋವಾ ಸಂಗೀತ ಉತ್ಸವದ ಮೇಲಿನ ಹಮಾಸ್ ದಾಳಿಯಲ್ಲಿ ತನ್ನ ಪ್ರೇಯಸಿ ಮತ್ತು ಆಪ್ತ ಸ್ನೇಹಿತನನ್ನು ಕಳೆದುಕೊಂಡಿದ್ದರು. ಎರಡು ವರ್ಷಗಳ ಬಳಿಕ, ಟೆಲ್ ಅವೀವ್‌ನಲ್ಲಿ ತನ್ನ ಕಾರಿಗೆ ಬೆಂಕಿ ಹಚ್ಚಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ, ಅವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. “ದಯವಿಟ್ಟು ನನ್ನ ಮೇಲೆ ಕೋಪಗೊಳ್ಳಬೇಡಿ. ನನ್ನನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಈ ನೋವು ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಾನು ಜೀವಂತವಾಗಿದ್ದೇನೆ, ಆದರೆ ನನ್ನೊಳಗೆ ಎಲ್ಲವೂ ಸತ್ತುಹೋಗಿದೆ” ಎಂದು ಬರೆದುಕೊಂಡಿದ್ದಾರೆ.
ದಾಳಿಯ ಕರಾಳ ದಿನ :ಅಕ್ಟೋಬರ್ 7, 2023 ರಂದು ಶಲೆವ್, ಅವರ ಪ್ರೇಯಸಿ ಮಪಾಲ್ ಆಡಮ್ ಮತ್ತು ಅವರ ಆಪ್ತ ಸ್ನೇಹಿತ ಹಿಲ್ಲಿ ಸೊಲೊಮನ್ ನೋವಾ ಸಂಗೀತ ಉತ್ಸವದಲ್ಲಿ ಪಾಲ್ಗೊಳ್ಳಲೆಂದು ತೆರಳಿದ್ದರು. ಅದೇ ಸಮಯದಲ್ಲಿ ಉತ್ಸವದ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದರು. ಆಗ ಇವರು ಮೂವರೂ ಒಂದು ಕಾರಿನ ಕೆಳಗೆ ಅಡಗಿಕೊಳ್ಳಲು ಪ್ರಯತ್ನಿಸಿದ್ದರು. ಶಲೆವ್ ತನ್ನ ಪ್ರೇಯಸಿಯ ಮೇಲೆ ಮಲಗಿ, ಇಬ್ಬರೂ ಸತ್ತಂತೆ ಗಂಟೆಗಳ ಕಾಲ ನಟಿಸಿದ್ದರು. ಆದರೆ, ಉಗ್ರರ ಗುಂಡಿನ ದಾಳಿಯಲ್ಲಿ ಇಬ್ಬರೂ ಗಾಯಗೊಂಡಿದ್ದರು ಮತ್ತು ಮಪಾಲ್ ಆಡಮ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಒಟ್ಟು 344 ನಾಗರಿಕರು ಸೇರಿದಂತೆ ಕನಿಷ್ಠ 378 ಜನರು ಮೃತಪಟ್ಟಿದ್ದರು. ಇದೇ ಘಟನೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಸುದೀರ್ಘ ಯುದ್ಧಕ್ಕೆ ಕಾರಣವಾಯಿತು.
ನಿರಂತರ ಆಘಾತ : ವಿಪರ್ಯಾಸವೆಂದರೆ, ಹಮಾಸ್ ದಾಳಿಯ ಕೆಲವೇ ದಿನಗಳ ನಂತರ ಮಪಾಲ್ ಆಡಮ್ ಅವರ ತಾಯಿ ಕೂಡ ತಮ್ಮ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಶಲೆವ್ ಸಾವಿನ ನಂತರ, ಮಪಾಲ್ ಅವರ ಸಹೋದರಿ ಮಾಯನ್, “ರೋಯಿಯನ್ನು ಅಕ್ಟೋಬರ್ 7 ರಂದು ಉಗ್ರರು ಕೊಂದರು. ಶಲೆವ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡ. ಈ ಇಬ್ಬರು ಮಕ್ಕಳು ಈಗ ಪರಸ್ಪರ ಆಲಿಂಗಿಸಿಕೊಂಡು ನಗುತ್ತಿರಬಹುದು” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ನೋವಾ ಟ್ರೈಬ್ ಕಮ್ಯುನಿಟಿ ಫೌಂಡೇಶನ್, ಶಲೆವ್ ಅವರನ್ನು “ಸಮುದಾಯದ ಬೆನ್ನೆಲುಬು” ಎಂದು ಬಣ್ಣಿಸಿದೆ. ಅವರ ಧೈರ್ಯ, ಬಾಸ್ಕೆಟ್‌ಬಾಲ್ ತಂಡದ ನಾಯಕತ್ವ ಮತ್ತು ಸ್ನೇಹಿತರಿಗೆ ನೀಡುತ್ತಿದ್ದ ಬೆಂಬಲವನ್ನು ಕೂಡ ಸ್ಮರಿಸಿ, ಅವರ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದೆ.