ಮಡಿಕೇರಿ: ಆಟವಾಡುತ್ತ ಕೆರೆಗೆ ಹಾರಿದ್ದ ಬಾಲಕಿ ಮೇಲೆ ಬರಲು ಆಗದೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಿಲ್ಲೆಯ (Kodagu) ಪೊನ್ನಂಪೇಟೆ (Ponnampete) ತಾಲೂಕಿನ ಅತ್ತೂರು ಗ್ರಾಮದ ಚೆನ್ನಂಗೊಲ್ಲಿಯಲ್ಲಿ ಈ ಘಟನೆ ನಡೆದಿದೆ. ಕಾಫಿ ಬೆಳೆಗಾರ ಕೆ.ಕೆ.ತಿಮ್ಮಯ್ಯ ಎಂಬುವವರಿಗೆ ಸೇರಿದ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಈ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಭವಾನಿ ಎಂಬುವವರ 9 ವರ್ಷದ ಪುತ್ರಿ ಸಾವನ್ನಪ್ಪಿದ್ದಾಳೆ.
ಬಾಲಕಿ ತನ್ನ ಸ್ನೇಹಿತರೊಂದಿಗೆ ಕೆರೆಯ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈಕೆ ಹಾಗೂ ಇನ್ನಿಬ್ಬರು ಮಕ್ಕಳು ಕೆರೆಗೆ ಹಾರಿದ್ದರು. ಕೆರೆಯಲ್ಲಿ ನೀರು ಬತ್ತಿ ಕೆಸರು ತುಂಬಿದ್ದರಿಂದ ಮೂವರು ಅದರೊಳಗೆ ಸಿಲುಕಿದ್ದಾರೆ. ಕೂಡಲೇ ಅಲ್ಲಿದ್ದವರು ಸ್ಥಳಕ್ಕೆ ಧಾವಿಸಿ, ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ, ಈ ಬಾಲಕಿಯನ್ನು ಕೆಸರಿನಿಂದ ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಸಾವನ್ನಪ್ಪಿರುವ ಬಾಲಕಿ 4ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಗೋಣಿಕೊಪ್ಪ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.